ಮೈಸೂರು : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಇಂದು ನಡೆದಿದೆ. ಲೋಕೇಶ್ ನಾಯಕ್ ಎಂಬುವರ ಪತ್ನಿ ಶಿವಮಲ್ಲಮ್ಮ (36) ಹುಲಿ ದಾಳಿಗೆ ಒಳಗಾದ ಮಹಿಳೆ.
ಪತಿ ಲೋಕೇಶ್ ನಾಯಕ ಹಾಗೂ ಪತ್ನಿ ಶಿವ ಮಲ್ಲಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಯಿಂದ ಮಹಿಳೆಗೆ ಗಾಯವಾಗಿದೆ. ಕೂಡಲೇ ಪತಿ ಲೋಕೇಶ್ ನಾಯಕ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹೆಡಿಯಾಲ ಭಾಗದಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ಇದೀಗ ಮತ್ತೆ ಮಹಿಳೆ ಮೇಲೆ ಹುಲಿ ದಾಳಿ ನಡೆಸಿರುವುದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದರಿಂದ ಗ್ರಾಮಸ್ಥರು ಜಮೀನಿಗೆ ತೆರಳು ಹಿಂದೇಟು ಹಾಕುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಬೋನು ಇಟ್ಟು ಹುಲಿಯನ್ನು ಸೆರೆ ಹಿಡಿಯಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಪ್ರತ್ಯೇಕ ಪ್ರಕರಣ- ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಸೆರೆ : ಕಳೆದ ನವೆಂಬರ್ ತಿಂಗಳಲ್ಲಿ ಮಹಿಳೆ ಹಾಗೂ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಹೆಡಿಯಾಲ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ನಂಜನಗೂಡು ತಾಲೂಕಿನ ಕಾಡಂಚಿನ ಪ್ರದೇಶವಾದ ಬಳ್ಳೂರು ಹುಂಡಿ ಗ್ರಾಮದಲ್ಲಿ ಹುಲಿ ಬೋನಿಗೆ ಬಿದ್ದಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 207 ಮಂದಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ 50ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಡ್ರೋನ್ ಕ್ಯಾಮರಾದ ಮೂಲಕವೂ ಹುಲಿ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಬಳಿಕ ಹೆಡಿಯಾಲ ವಲಯದ ಗಡಿಯಲ್ಲಿ ಜಾನುವಾರು ಮಾಂಸ ತಿನ್ನಲು ಬಂದ ವೇಳೆ ಅರವಳಿಕೆ ಮದ್ದು ನೀಡಿ ಹುಲಿ ಸೆರೆ ಹಿಡಿಯಲಾಗಿತ್ತು. ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಸಮೀಪದ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಮೈಸೂರಿನ ಭಾಗದಲ್ಲಿ ಚಿರತೆ ಮತ್ತು ಹುಲಿ ದಾಳಿ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ನಂಜನಗೂಡು: ಮಹಿಳೆಯನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ