ಮೈಸೂರು: ಮೇಯರ್ ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮೇಯರ್ ಹುದ್ದೆ ಯಾವ ಪಕ್ಷದ ಪಾಲಾಗಲಿದೆ ಎಂಬುದೀಗ ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಹಿಂದೆ ಇದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಮೂರು ಪಕ್ಷದ ಪಾಲಿಕೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಪಾಲಿಕೆ ಸದಸ್ಯೆ ಸುನಂದ ನೇತ್ರಪಾಲ್ ಪಾಲಿಕೆಯ ಬಾಗಿಲಿಗೆ ನಮಸ್ಕರಿಸಿ, ಬಿಜೆಪಿ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್ ಅವರೊಂದಿಗೆ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ನಿಂದ ವಾರ್ಡ್ ನಂಬರ್ 37ರ ಪಾಲಿಕೆ ಸದಸ್ಯೆ ಅಶ್ವಿನಿ ಅನಂತ್, ಜೆಡಿಎಸ್ ಸದಸ್ಯರೊಟ್ಟಿಗೆ ಬಂದು ನಾಮಪತ್ರ ಸಲ್ಲಿಸಿದರು. ಇದರ ಜೊತೆಗೆ ವಾರ್ಡ್ 32ರ ಕಾಂಗ್ರೆಸ್ ಸದಸ್ಯೆ ಶಾಂತಕುಮಾರಿ ಸಹ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ನಡುವೆ ಮುರಿದು ಬಿದ್ದ ಮೈತ್ರಿ
ಕಳೆದ 3 ವರ್ಷಗಳಿಂದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಇತ್ತು. ಆದರೆ ಈ ಬಾರಿ ಜೆಡಿಎಸ್ನ ಮೇಯರ್ ಆಗಿದ್ದ ರುಕ್ಮಿಣಿ ಮಹದೇವ್ ಅವರ ಸದಸ್ಯತ್ವ ರದ್ದಾಗಿದ್ದು ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ನಿರಾಕರಿಸಿತ್ತು. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಮುರಿದುಬಿದ್ದಿದ್ದು ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಅತೀ ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿ ಪಕ್ಷ ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಮೇಯರ್ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಕೊನೆ ಕ್ಷಣದಲ್ಲಿ ಕಳೆದ ಬಾರಿ ನಡೆದ ಹೈಡ್ರಾಮದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ನಡೆದರೆ ಜೆಡಿಎಸ್ ಮತ್ತೆ ಮೇಯರ್ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೈಸೂರು ಮೇಯರ್ ಚುನಾವಣೆ.. ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ವರಿಷ್ಠರ ಸೂಚನೆ : ಶಾಸಕ ತನ್ವೀರ್ ಸೇಠ್