ಮೈಸೂರು: ತಿ.ನರಸೀಪುರ ಪಟ್ಟಣದ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ತಿ.ನರಸೀಪುರದ ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕರಾದ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಡಿಜಿಟಲ್ ಲಾಕರ್ನಲ್ಲಿಟ್ಟಿದ್ದ ಸುಮಾರು 3 ಕೆ.ಜಿ 250 ಗ್ರಾಂ ವಿವಿಧ ಮಾದರಿಯ ಚಿನ್ನದ ಒಡವೆಗಳು, 12 ಕೆ.ಜಿ ಬೆಳ್ಳಿ ಗಟ್ಟಿ ಹಾಗೂ 30 ಲಕ್ಷ ರೂ.ನಗದು ಹಣವನ್ನು ಕಳ್ಳತನವಾಗಿತ್ತು.
ವಿಶೇಷ ತಂಡ ರಚನೆ: ಈ ಬಗ್ಗೆ ಮಾಲೀಕರಾದ ಶ್ರೀನಿವಾಸ್ ಅವರು ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರ ನಿರ್ದೇಶನದಂತೆ ಅಪಾರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರ ನೇತೃತ್ವದಲ್ಲಿ ಪಿಐ ಶ್ರೀಕಾಂತ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್, ತಿ.ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್, ಪಿಎಸ್ಐ ಜಯಪ್ರಕಾಶ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.
ತಿ. ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಸನದ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನ ಇನ್ನಿಬ್ಬರು ಸಹಚರರೊಂದಿಗೆ ತಿ.ನರಸೀಪುರದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಯಿಂದ 791.510 ಗ್ರಾಂ ಚಿನ್ನ ಮತ್ತು 499.260 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪೈಕಿ ಒಬ್ಬ ಹಾಸನ ಜಿಲ್ಲೆಯ ಜೈಲಿನಲ್ಲಿದ್ದು, ಉಳಿದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳ್ಳನನ್ನು ಬಂಧಿಸಿದ ತಂಡವನ್ನು ಪ್ರಶಂಸಿದರು.
ಇದನ್ನೂ ಓದಿ: ಮೈಸೂರು ಚರ್ಚ್ ಕಳ್ಳತನ ಪ್ರಕರಣದ ಆರೋಪಿ ಸೆರೆ; ಕೃತ್ಯ ಎಸಗಿದ್ದು ಈ ಕಾರಣಕ್ಕೆ!
ಚರ್ಚ್ ಕಳ್ಳತನ ಪ್ರಕರಣದ ಆರೋಪಿ ಸೆರೆ: ಪಿರಿಯಾಪಟ್ಟಣದ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್‌ನ ಪೌರ ಕಾರ್ಮಿಕನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆಯ ನಿವಾಸಿ ವಿಶ್ವ ಚರ್ಚ್‌ನಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಎರಡು ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಈ ಬಗ್ಗೆ ಕ್ರಿಸ್ಮಸ್ ಸಂದರ್ಭದಲ್ಲಿ ಫಾದರ್ ಜೊತೆ ಚರ್ಚಿಸಲು ಬಂದಿದ್ದಾಗ ಅವರು ಭೇಟಿ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಸಿಟ್ಟಿಗೆದ್ದು ಫಾದರ್ ಇಲ್ಲದ ವೇಳೆ ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್‌ನ ಮೂರು ಹುಂಡಿ ಕಳ್ಳತನ ಮಾಡಿದ್ದಾನೆ. ಹುಂಡಿಗಳಿಂದ ಎರಡು ಸಾವಿರ ರೂ. ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದರು.