ಮೈಸೂರು: ಸ್ವಂತ ಅತ್ತೆ ಮನೆಗೇ ಕನ್ನ ಹಾಕಿದ್ದ ಅಳಿಯನನ್ನು ಪೊಲೀಸರು ಬಂಧಿಸಿ ಆತನಿಂದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕನ್ನ ಹಾಕಿದ ಆರೋಪಿ ಪುನೀತ್ (20) ಹಾಗೂ ಸ್ನೇಹಿತ ಲೋಕೇಶ್(21)ನನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 7.50 ಲಕ್ಷ ಮೌಲ್ಯದ 159 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿರಮಳ್ಳಿ ಗ್ರಾಮದ ನಾಗೇಶಮ್ಮ ತಮ್ಮ ತಂದೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ, ತನ್ನ ಅಣ್ಣನ ಮನೆಯಲ್ಲಿ ತಂಗಿದ್ದರು. ಈ ಸಮಯಕ್ಕೆ ಹೊಂಚು ಹಾಕಿದ್ದ ನಾಗೇಶಮ್ಮ ತಮ್ಮನ ಮಗ ಪುನೀತ್ ನಾಗೇಶಮ್ಮನ ಮನೆಯ ಹೆಂಚು ತೆಗೆದು ಒಳಹೋಗಿ 7.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿ ಸಂಬಂಧಿಕರ ಜಮೀನಿನ ಕಬ್ಬಿ ಗದ್ದೆಯಲ್ಲಿ ಹೂತು ಹಾಕಿದ್ದ. ಈತನ ಕಾರ್ಯಕ್ಕೆ ಸ್ನೇಹಿತ ಪುನೀತ್ ಲೋಕೇಶ್ ಸಾಥ್ ನೀಡಿದ್ದ.
ಮಂಗಳವಾರ ಬೆಳಗೆ ಮನೆಯಲ್ಲಿ ಚಿನ್ನಾಭರಣ ಕಳುವಾಗಿದೆ ಎಂದು ನಾಗೇಶಮ್ಮ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ಚುರುಕುಗೊಳಿಸಿದ ಪೊಲೀಸರು ಅನುಮಾನದ ಮೇಲೆ ಮಂಗಳವಾರ ಸಂಜೆ ಪುನೀತನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆಗೊಳಪಡಿಸಿದಾಗ, ಚಿನ್ನಾಭರಣ ಕದ್ದು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ ಕದ್ದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು, ಖದೀಮರನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.