ಮೈಸೂರು: ಸಾಲಗಾರರ ಕಾಟ ತಾಳಲಾರದೇ ಕ್ಷೌರಿಕ ವೃತ್ತಿ ನಡೆಸುತ್ತಿದ್ದ ವ್ಯಕ್ತಿ ಸೆಲ್ಫಿ ವಿಡಿಯೋ ಮಾಡಿ ಕಲ್ಲು ಕ್ವಾರಿಯ ಹಳ್ಳಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ನಡೆದಿದೆ.
ಹೀಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಯೋಗೇಶ್ (28). ಈತ ಪಂಚವಳ್ಳಿ ಗ್ರಾಮದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದ. ಸಲೂನ್ ಶಾಪ್ ತೆರೆಯಲು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದು ಕೊರೊನಾ ಸಮಯದಲ್ಲಿ ಸಲೂನ್ಗೆ ಬೀಗ ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಸಾಲಗಾರರ ಕಾಟ ಹೆಚ್ಚಾಗಿದ್ದು, ಸರಿಯಾಗಿ ವ್ಯಾಪಾರ ನಡೆಯದೇ ನನ್ನ ಸಾವಿಗೆ ಖಾಸಗಿ ವ್ಯಕ್ತಿಗಳು ಕಾರಣ ಎಂದು ಅವರ ಹೆಸರನ್ನು ಹೇಳಿ ಸೆಲ್ಫಿ ವಿಡಿಯೋ ಮಾಡಿ ಗ್ರಾಮದ ಬಳಿ ಕಲ್ಲು ಕ್ವಾರಿಯ ಹಳ್ಳಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಷಯ ತಿಳಿದ ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.