ಮೈಸೂರು : ನಾಡ ಹಬ್ಬ ದಸರಾ ಸರಳವಾಗಿರಬೇಕೋ ಅಥವಾ ಸಂಪ್ರದಾಯಿಕವಾಗಿರಬೇಕೋ ಎಂಬುವುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ನಾಳೆ (ಶುಕ್ರವಾರ) ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಮೈಸೂರಿಗೆ ಆಗಮಿಸಲಿದೆ.
ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ ನೇತೃತ್ವದ ತಂಡ ಮೈಸೂರಿಗೆ ಆಗಮಿಸಿ, ದಸರಾ ಪೂರ್ವಭಾವಿ ಸಿದ್ಧತೆ ಹಾಗೂ ಕೋವಿಡ್ -19 ಹರಡದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದೆ.
ತಾಂತ್ರಿಕ ಸಮಿತಿ ತಂಡಕ್ಕೆ ಮಾಹಿತಿ ನೀಡಲು ಜಿಲ್ಲಾಡಳಿತದಿಂದ ಉಪವಿಭಾಗಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ, ಅರಮನೆ ಭದ್ರತಾ ಪಡೆಯ ಸಹಾಯಕ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಡಳಿತದಿಂದ ನೇಮಕಗೊಂಡಿರುವ ಅಧಿಕಾರಿಗಳು, ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಗೆ ಸೂಕ್ತ ಮಾಹಿತಿ ನೀಡಲಿದ್ದಾರೆ. ಎರಡು ದಿನದೊಳಗೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ವರದಿ ಆಧರಿಸಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.