ಮೈಸೂರು : ಶಿಕ್ಷಣದ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯ. ಆದ್ದರಿಂದಲೇ ನಾವು ಇಂದು ಚಂದ್ರನನ್ನು ಕೂಡಾ ಮುಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದರು. ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸ್ವತಂತ್ರ ಪೂರ್ವದಲ್ಲಿ ಭಾರತದ ಜನಸಂಖ್ಯೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಸಾಕ್ಷರತೆ ಇತ್ತು. ಸ್ವಾತಂತ್ರ್ಯ ಪಡೆದುಕೊಂಡ ನಂತರ ನಮ್ಮದೇ ಆದ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವಾಗ ನಮ್ಮಲ್ಲಿನ ಸಾಕ್ಷರತೆ ಮಟ್ಟ ಬಹಳ ಕಡಿಮೆ ಇತ್ತು. ಭಾರತದ ಚರಿತ್ರೆ ಕತ್ತಲಲ್ಲಿ ವಾಸಿಸುವ ಪರಿಸ್ಥಿತಿಯನ್ನು ಹೊಂದಿತ್ತು. ಆಗ ಬೆಳಕು ಹುಡುಕಲು ಶಿಕ್ಷಣವಿರಲಿಲ್ಲ. ಸನಾತನವಾದಗಳು ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದವು. ಶಿಕ್ಷಣ ಪಡೆದುಕೊಂಡರೆ ಕಾದ ಬಿಸಿ ಎಣ್ಣೆ ಸುರಿವ ದುಃಸ್ಥಿತಿ ಇತ್ತು. ಲಾರ್ಡ್ ಮೆಕಾಲೆ ಇಂಗ್ಲಿಷ್ ಶಿಕ್ಷಣವನ್ನು ಉದಾರೀಕರಣಗೊಳಿಸದ್ದಿದ್ದರೆ ನಾವು ಎಲ್ಲಾದರೂ ಜೀತ ಮಾಡುತ್ತಿರಬೇಕಿತ್ತು ಎಂದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ರಾಷ್ಟ್ರಕವಿ ಕುವೆಂಪುರವರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಶೇ 75 ರಷ್ಟ ಸಾಕ್ಷರತೆ: 1964ರಲ್ಲಿ ಸುಬ್ರಹ್ಮಣ್ಯ ಕಮಿಷನ್ನಲ್ಲಿ ಬಂದ ಹೊಸ ಶಿಕ್ಷಣ ನೀತಿ ಹಾಗೂ 1984ರ ಕೊತಾರಿ ಕಮಿಷನ್ ಬಂದ ಮೇಲೆ ಶಿಕ್ಷಣದ ಸ್ಥಿತಿಗತಿ ಸುಧಾರಣೆಗೊಂಡಿದೆ. ಪ್ರಸ್ತುತ ಶೇ.75ರಷ್ಟು ಸಾಕ್ಷರತೆಯನ್ನು ನಾವು ಸಾಧಿಸಿದ್ದೇವೆ. ಆದರೆ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಮುಕ್ತವಾದ ಶಿಕ್ಷಣ ವ್ಯವಸ್ಥೆ ಇದ್ದರೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಇರಬಹುದಿತ್ತು. ರಾಜಕೀಯ ಮುತ್ಸದಿ ಹಾಗೂ ಶಿಕ್ಷಣ ತಜ್ಞರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಎಲ್ಲ ಶಿಕ್ಷಕರಿಗೂ ಗೌರವವನ್ನು ಸಲ್ಲಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕೇವಲ ಶಾಲೆಗಳಲ್ಲಿ ಪಾಠ ಮಾಡಿವವರು ಮಾತ್ರ ಶಿಕ್ಷಕರಲ್ಲ. ನಮ್ಮ ಜೀವನದಲ್ಲಿ ಜೀವನ ಪಾಠ ಹೇಳಿ ಕೊಟ್ಟವರು ಶಿಕ್ಷಕರೇ. ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಾ, ಮಗುವನ್ನು ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ನಿರ್ಮಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣ ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿರದೇ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಪೂರಕವಾಗುವಂತಿರಲಿ. ಭಾರತದ 140 ಕೋಟಿ ಜನರ ಯೋಗ ಕ್ಷೇಮ ಶಿಕ್ಷಣವನ್ನು ಅವಲಂಬಿಸಿದೆ. ಸಿದ್ಧಾಂತಗಳ ಮೂಲಕ ದೇಶವನ್ನು ಎಚ್ಚರಿಸುವುದು, ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡಬೇಕೆಂಬುದು ಡಾ. ಬಿಆರ್ ಅಂಬೇಡ್ಕರ್ ರವರ ಸಂದೇಶವಾಗಿತ್ತು ಎಂದು ತಿಳಿಸಿದರು.
ಶಿಕ್ಷಣಕ್ಕೆ ಪೂರಕವಾದ ಯೋಜನೆಗಳ ವಿಸ್ತರಣೆ: ಪ್ರಸ್ತುತ ಸರ್ಕಾರ ವಿದ್ಯಾರ್ಥಿಗಳಿಗೆ ಹಾಗೂ ಅವರ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಯೋಜನೆಗಳನ್ನು ವಿಸ್ತರಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದಲ್ಲದೆ ಪ್ರಥಮ ದರ್ಜೆಯ ನಾಗರಿಕರಾಗಿಯೂ ಹೊರಹೊಮ್ಮಬೇಕು. ನಮ್ಮ ಜಿಲ್ಲೆಯಲ್ಲಿ ಸುಮಾರು 19,000 ಶಿಕ್ಷಕರಿದ್ದಾರೆ. 4,20,000ಕ್ಕೂ ಹೆಚ್ಚು ಮಕ್ಕಳಿದ್ದಾರೆ. 33 ಶಿಕ್ಷಕರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದು, ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 33 ಶಿಕ್ಷಕರನ್ನು, ನಿವೃತ್ತ ಶಿಕ್ಷಕರನ್ನು ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕರು 'ನಮ್ಮ ದಿನದಂದು ನಮ್ಮ ಹಕ್ಕೋತಾಯಗಳು' ಎಂಬ ಶಿಕ್ಷಕರ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ ಹರೀಶ್ ಗೌಡ, ಟಿ ಎಸ್ ಶ್ರೀವತ್ಸ, ವಿಧಾನಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡ, ಮರಿತಿಬ್ಬೇಗೌಡ ಹಾಗೂ ಮಹಾನಗರ ಪಾಲಿಕೆಯ ಮಹಾಪೌರ ಶಿವಕುಮಾರ್, ಉಪ ಮಹಾಪೌರ ಡಾ.ಜಿ ರೂಪ, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಕೆ ಎಂ, ಪ್ರಧಾನ ಭಾಷಣಕಾರ ಶಿವಪ್ರಕಾಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಂಡು ಹೆಚ್ ಕೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಕಸದಿಂದ ರಸ: ನಿರುಪಯುಕ್ತ ವಸ್ತುಗಳಿಂದ ಅಲಂಕಾರಿಕ ವಸ್ತು ಸಿದ್ದಪಡಿಸಿದ ವಿದ್ಯಾರ್ಥಿಗಳು