ಮೈಸೂರು: ಸಿಎಂ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಆದರೆ, ಯಡಿಯೂರಪ್ಪ ಅನುಭವಸ್ಥರು. ಯಾವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದರೋ ಗೊತ್ತಿಲ್ಲ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.
ಇಂದು ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ, ಜಗನ್ಮೋಹನ ಅರಮನೆಗೆ ಆಗಮಿಸಿದ್ದ ಅವರು, ಭಾನುವಾರ ದಾವಣಗೆರೆಯಲ್ಲಿ "ನನ್ನದು ತಂತಿಯ ಮೇಲೆ ನಡೆಯೋ ಪರಿಸ್ಥಿತಿ" ಇದೆ ಎಂದು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಳೆ ಅವರೇ ಮೈಸೂರಿಗೆ ಆಗಮಿಸುತ್ತಾರೆ. ಈ ಬಗ್ಗೆ ಅವರ ಬಳಿಯೇ ಕೇಳುತ್ತೇನೆ ಎಂದರು.
ಇನ್ನು ಶಾಸಕ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು, ಕತ್ತಿ ನನ್ನ ಆತ್ಮೀಯ ಸ್ನೇಹಿತ, ಆತನ ಹೇಳಿಕೆ ಸರಿಯಿಲ್ಲ. ಅದರಲ್ಲೂ ನೂರಾರು ಯೋಚನೆಗಳು ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ರಾಜ್ಯ ಮುಖ್ಯಮಂತ್ರಿಯವರ ಬಗ್ಗೆ ಮುಜುಗರವಾಗುವ ಹೇಳಿಕೆಯನ್ನು ನೀಡುವುದು ಸರಿಯಲ್ಲ. ನಾನೇ ಕತ್ತಿಯನ್ನ ಭೇಟಿ ಮಾಡಿ ಈ ಬಗ್ಗೆ ಪ್ರಶ್ನಿಸುತ್ತೇನೆ. ಅವರು ಅರ್ಥ ಮಾಡಿಕೊಂಡು ತಿದ್ದಿಕೊಳ್ಳುತ್ತಾರೆ ಎಂದರು.