ಮೈಸೂರು: ಹಿಂದಿನ ಮೈತ್ರಿ ಮುರಿಯಲು ಸಿದ್ದರಾಮಯ್ಯ ಅವರೇ ಕಾರಣ. ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ. ಜೆಡಿಎಸ್ ಪಕ್ಷಕ್ಕೆ ಶಕ್ತಿನೇ ಇಲ್ಲ ಎಂಬ ಪದ ಬಳಸಿದ್ದಾರೆ. ಮೈಸೂರಿನಲ್ಲಯೇ ನಮ್ಮ ಪಕ್ಷದ ಶಕ್ತಿ ಏನು ಎಂದು ತೋರಿಸಲು ಹೊರಟಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮೈಸೂರಿನ ಹೂಟಗಳ್ಳಿಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಎಲ್ಲ ನಾಯಕರು ಲಘುವಾಗಿ ಮಾತನಾಡಲ್ಲ. ಆದರೆ, ಕೆಲವರು ಲಘುವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಪದೇ ಪದೆ ನಮ್ಮ ಪಕ್ಷವನ್ನು ಕೆಣಕುವ ಹೇಳಿಕೆಗಳನ್ನೇ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಿ ಎಂದು ಹೆಚ್.ಡಿ. ದೇವೇಗೌಡರು ಸಲಹೆ ನೀಡಿದ್ದಾರೆ. ಕೆಲವರು ನಮ್ಮನ್ನ ಬಿ ಟೀಮ್ ಎಂದು ಕರೆದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳಿಸಲು ಕಾರಣವಾದರು. ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕ್ತಾರೆ. ಡಿಕೆಶಿ ಮೇಲು ಒತ್ತಾಯ ಹಾಕಿ ಕೈ ಕಟ್ಟಿಹಾಕಿದ್ದಾರೆ. ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಗುರಿ 2023. ಯಾರು ಲಘುವಾಗಿ ಮಾತನಾಡುತ್ತಿದ್ದಾರೋ ಅವರಿಗೆ ಉತ್ತರ ಕೊಡಲು ಹೊರಟಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕವನ್ನು ಅತ್ಯಂತ ಲಘುವಾಗಿ ಕಾಣುತ್ತಿರುವ ಪಕ್ಷ ಬಿಜೆಪಿ. ಈ ಹಿನ್ನೆಲೆ ಎರಡು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದೇವೆ. ಅಕ್ಕಪಕ್ಕದ ರಾಜ್ಯಗಳಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಹೊರಹೊಮ್ಮಬೇಕು ಎಂದರು.
ಓದಿ: ಜಿಲೆಟಿನ್ ಸ್ಫೋಟಕ್ಕೆ ಸರ್ಕಾರದ ಬೇಜವಾಬ್ದಾರಿತನ, ಅಧಿಕಾರಿಗಳ ಪ್ರೋತ್ಸಾಹವೇ ಕಾರಣ: ಹೆಚ್ಡಿಕೆ ಕಿಡಿ
ಜಿ.ಟಿ.ದೇವೇಗೌಡರು ಪರಿವರ್ತನೆಯಾಗ್ತಾರೆ ಎಂಬ ವಿಚಾರವಾಗಿ ಮಾತನಾಡಿ, ಹಲವಾರು ಸಂದರ್ಭದಲ್ಲಿ ಹಲವಾರು ನಾಯಕರು ಪರಿವರ್ತನೆ ಆಗೋದನ್ನ ನೋಡಿದ್ದೇವೆ. ಪರಿವರ್ತನೆಯಾಗುವುದು ಅವರಿಗೆ ಬಿಟ್ಟಿದ್ದು. ಈಗಾಗಲೇ ಪಕ್ಷ ಬಿಟ್ಟು ಹೋದ ಮೇಲೆ ಏನಾಗುತ್ತೆ ಎಂದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದರು.