ಮೈಸೂರು: ಯುಪಿ ಸಿಎಂ ಯೋಗಿ ಆದಿತ್ಯನಾಥ್ಗೆ ಖಾವಿ ಬಟ್ಟೆ ಧರಿಸುವ, ಸಿಎಂ ಆಗುವ ಯೋಗ್ಯತೆಯಿಲ್ಲ. ಅವರ ಮೇಲೆಯೇ 27 ಪ್ರಕರಣಗಳಿವೆ. ಈಗ ಅದೆಲ್ಲವನ್ನೂ ಹಿಂತೆಗೆದುಕೊಳ್ಳಲಾಗಿದೆ ಎಂದು ಕಿಡಿಕಾರಿದರು.
ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಥ್ರಾಸ್ ಅತ್ಯಾಚಾರದ ಬಗ್ಗೆ ಮೋದಿ ಮಾತನಾಡಬೇಕಿತ್ತು. ಬೇಟಿ ಬಾಚಾವೋ, ಬೇಟಿ ಪಡಾವೋ ಹೋಗಿ ಬೇಟಿ ಹಠಾವೋ ಎಂದಾಗುತ್ತಿದೆ. ಈ ಕೂಡಲೇ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ನಾವು ದೆಹಲಿ ನಿರ್ಭಯಾ ಪ್ರಕರಣದಲ್ಲಿ ಎಷ್ಟೊಂದು ಸಹಾಯ ಮಾಡಿದ್ವಿ. ಆದ್ರೆ ಇವರು ಪೊಲೀಸರನ್ನ ಬಳಸಿಕೊಂಡು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮೇಲೆ ಹಲ್ಲೆ ಮಾಡಿಸಿದರು. ನವಿಲು ಕರೆದು ಆಹಾರ ಹಾಕೋಕೆ ಟೈಂ ಇದೆ, ಟ್ರಂಪ್ಗೆ ಟ್ವೀಟ್ ಮಾಡೋಕೆ ಟೈಂ ಸಿಗುತ್ತೆ. ಆದರೆ ಸಂತ್ರಸ್ತೆ ಪರವಾಗಿ ಟ್ವೀಟ್ ಮಾಡೋಕೆ ಮೋದಿಗೆ ಟೈಂ ಸಿಗಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ಉಪಚುನಾವಣೆ ವಿಚಾರವಾಗಿ, ಆರ್ಆರ್ ನಗರಕ್ಕೆ ಡಿ.ಕೆ.ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ನಾವು ಹೈಕಮಾಂಡ್‌ಗೆ ಕುಸುಮಾ ಹೆಸರು ಕಳುಹಿಸಿದ್ದೇವೆ. ಅವರೇ ಅಂತಿಮವಾಗಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಇಂದು ಅಥವಾ ನಾಳೆ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ. ಕುಸುಮಾ ಸ್ಪರ್ಧೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಲಿ. ನಮ್ಮ ಪಕ್ಷದ ಅಭ್ಯರ್ಥಿಗೆ ವೋಟು ಕೇಳೋದು ನಮ್ಮ ಕರ್ತವ್ಯ. ವಿರೋಧ ಪಡಿಸುವವರನ್ನ ನಾವು ಬೇಡ ಅನ್ನೋಕೆ ಆಗಲ್ಲ. ಆರ್ಆರ್ ನಗರ ಹಾಗೂ ಶಿರಾ ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಆರ್ಆರ್ ಕ್ಷೇತ್ರದಲ್ಲಿ ಮುನಿರತ್ನಗೆ ಟಿಕೆಟ್ ನೀಡುವುದು ಹಾಗೂ ಬಿಡುವುದು, ಬಿಜೆಪಿ ಪಕ್ಷದ ಆಂತರಿಕ ವಿಚಾರ. ಅದನ್ನು ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಸಿಬಿಐ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಡಿ.ಕೆ.ಬ್ರದರ್ಸ್ ಮೇಲೆ ಸಿಬಿಐ ದಾಳಿ ಮಾಡಿರುವುದು ರಾಜಕೀಯ ದುರುದ್ದೇಶದಿಂದ. ಬಿಜೆಪಿಯವರ ಮೇಲೆ ಯಾಕೆ ಸಿಬಿಐ ರೋಟಿನ್ ದಾಳಿ ಮಾಡಲ್ಲ. ಅಲ್ಲಿ ಇರುವ ಎಲ್ಲರು ಸತ್ಯ ಹರಿಶ್ಚಂದ್ರರಾ? ಅವರು ಯಾರು ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆಯನ್ನೆ ಮಾಡಿಲ್ವಾ? ಯಾಕೆ ಉಪಚುನಾವಣೆ ಸಂದರ್ಭದಲ್ಲೆ ರೇಡ್ ಮಾಡಬೇಕು ಎಂದು ಪ್ರಶ್ನಿಸಿದರು.
ದಸರಾ ಪೂಜೆಗೆ ಸೀಮಿತಗೊಳಿಸಿ: ಮೈಸೂರು ದಸರಾವನ್ನ ಪೂಜೆಗೆ ಸೀಮಿತ ಮಾಡಿ. ಬೆಟ್ಟದಲ್ಲಿ ಉದ್ಘಾಟನೆ ಮಾಡಿ ಅರಮನೆಯಲ್ಲಿ ಪೂಜೆ ಮಾಡಿ ಸಾಕು. ಸುಮ್ಮನೆ ಜನ ಸೇರಿಸಿ ಕೊರೊನಾ ಹಬ್ಬಲು ಕಾರಣವಾಗಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.