ಮೈಸೂರು : ಸಿದ್ದರಾಮಯ್ಯ ಯಾವಾಗಲೂ ತಮ್ಮ ಶಕ್ತಿಯ ಮೇಲೆ ಸಿಎಂ ಆಗಿಲ್ಲ, 2013 ರಲ್ಲಿ ಬಿಜೆಪಿ, ಕೆಜೆಪಿ ಎಂದು ವಿಭಾಗ ಆಗಿತ್ತು. ಅದರ ಲಾಭ ಪಡೆದು ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿ ಆದರು. ಈಗ ಗ್ಯಾರಂಟಿ ಎಂದು ಹೇಳಿಕೊಂಡು ಸಿಎಂ ಆಗಿದ್ದಾರೆ. ಯಾವಾಗಲೂ ಲಾಟರಿ ಮುಖ್ಯಮಂತ್ರಿ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಮೈಸೂರಿಗೆ ಪಕ್ಷದ ಕಾರ್ಯಕ್ರಮದ ಹಿನ್ನೆಲೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, " ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ ಆಗಿದ್ದು, ಯಾವಾಗಲೂ ಅವರು ತಮ್ಮ ಶಕ್ತಿಯ ಮೇಲೆ ಸಿಎಂ ಆಗಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರುತ್ತದೆ. ಆಗ ಕಾಂಗ್ರೆಸ್ ಸ್ಥಿತಿ ಏನು ಎಂದು ಗೊತ್ತಾಗುತ್ತದೆ. ಇದರ ಜೊತೆಗೆ ಗ್ಯಾರಂಟಿ ಯೋಜನೆಗಳ ಸ್ಥಿತಿ ಏನಾಗುತ್ತದೆ ಎಂಬುದನ್ನು ನೋಡುತ್ತಿರಿ" ಎಂದು ವ್ಯಂಗ್ಯವಾಡಿದರು.
ಬಳಿಕ, ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರತಾಪ್ ಸಿಂಹನ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ಗೆ ಮತಗಳು ಬರುತ್ತದೆ ಎಂದುಕೊಂಡಿದ್ದಾರೆ. ಆದ್ರೆ, ಇದೆಲ್ಲಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಹೇಳಿದರು.
ಹಿಂದೂ ಧರ್ಮದ ವಿರುದ್ಧ ಮಾತನಾಡಿದರೆ ಭಸ್ಮ ಆಗುತ್ತಾರೆ : ಸನಾತನ ಹಿಂದೂ ಧರ್ಮ ಮಲೇರಿಯಾ, ಡೆಂಗ್ಯೂ ಇದ್ದಂತೆ ಎಂಬ ಉದಯ ನಿಧಿ ಸ್ಟಾಲಿನ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆ ಭಸ್ಮ ಆಗುತ್ತಾರೆ. ಅವನೇನು ಆಕಾಶದಿಂದ ಇಳಿದು ಬಂದಿಲ್ಲ, ತಾಕತ್ತಿದ್ದರೆ ಅವನು ಅವನ ಧರ್ಮವನ್ನು ಟೀಕೆ ಮಾಡಲಿ, ಮುಸ್ಲಿಂ ಧರ್ಮ ಟೀಕೆ ಮಾಡಿ ನೋಡಲಿ ಎಂದು ಉದಯನಿಧಿ ಸ್ಟಾಲಿನ್ಗೆ ಸವಾಲು ಹಾಕಿದರು.
ಇದನ್ನೂ ಓದಿ : Sanatana Dharma : ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ
ಹಾವೇರಿಯಿಂದ ನನ್ನ ಮಗನಿಗೆ ಟಿಕೆಟ್ ಕೇಳಿದ್ದೇವೆ : ಮುಂದಿನ ಲೋಕಸಭಾ ಚುನಾವಣೆಗೆ ನನ್ನ ಮಗ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಹಾವೇರಿಯಿಂದ ಟಿಕೆಟ್ ನೀಡುವಂತೆ ಕೇಳಿದ್ದೇವೆ. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಕಾದು ನೋಡೋಣ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇವೆ. ಇಲ್ಲದಿದ್ದರೆ ಟಿಕೆಟ್ ಕೊಟ್ಟವರ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ .. ದೇಶದ ಜನತೆಯ ಕ್ಷಮೆಯಾಚಿಸುವಂತೆ ಅಶ್ವತ್ಥ್ ನಾರಾಯಣ್ ಆಗ್ರಹ
ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಲ್ಲ : ಬಿಜೆಪಿ ಸಭೆಯ ಬಗ್ಗೆ ರೇಣುಕಾಚಾರ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಅವರ ಹೇಳಿಕೆಗೆ ಯಾಕೆ ಮಹತ್ವ ಕೊಡುತ್ತೀರಿ. ನಮ್ಮ ಎದುರಾಳಿ ಕಾಂಗ್ರೆಸ್ ಪಕ್ಷದಿಂದ ರೇಣುಕಾಚಾರ್ಯ ಅವರಿಗೆ ನೋಟಿಸ್ ನೀಡಿದ್ದಾರೆ ಎನ್ನುವ ಮೂಲಕ ಈ ಕುರಿತು ಮಾತನಾಡಲು ನಿರಾಕರಿಸಿದರು.
ಇದನ್ನೂ ಓದಿ : ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ : ಎಂ.ಪಿ.ರೇಣುಕಾಚಾರ್ಯ