ಮೈಸೂರು : ಬಿಜೆಪಿಯವರು ರಾಷ್ಟ್ರ ಬಾವುಟಕ್ಕೆ ಗೌರವ ಕೊಟ್ಟವರಲ್ಲ. ಅವರು ರಾಷ್ಟ್ರಗೀತೆ ಮತ್ತು ರಾಷ್ಟ್ರ ಬಾವುಟವನ್ನು ವಿರೋಧಿಸುವವರು. ಹರ್ ಘರ್ ತಿರಂಗಾ ಹೆಸರಿನಲ್ಲಿ ಬಿಜೆಪಿಗರು ನಾಟಕ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರ್ ಘರ್ ತಿರಂಗಾ ಬಿಜೆಪಿಯವರ ನಾಟಕ. ಬಿಜೆಪಿಯವರು ರಾಷ್ಟ್ರ ಬಾವುಟಕ್ಕೆ ಗೌರವ ಕೊಟ್ಟವರಲ್ಲ. ಅವರು ರಾಷ್ಟ್ರಗೀತೆ, ರಾಷ್ಟ್ರ ಬಾವುಟ, ದೇಶದ ಸಂವಿಧಾನವನ್ನು ವಿರೋಧಿಸುವವರು ಎಂದು ಆರೋಪಿಸಿದರು. ಆರ್ಎಸ್ಎಸ್ ನವರು ಆರಾಧಿಸುವ ಸಾವರ್ಕರ್ ಮತ್ತು ಗೋಳ್ವಲ್ಕರ್ ಅವರಿಗೆ ಬಾವುಟದ ಮೇಲೆ ನಂಬಿಕೆ ಇರಲಿಲ್ಲ. ಆದರೂ ಬಿಜೆಪಿ ಸ್ವತಂತ್ರ ಅಮೃತ ಮಹೋತ್ಸವವನ್ನು ರಾಜಕೀಯ ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಭಾರತದ ರಾಷ್ಟ್ರಧ್ವಜ ಖಾದಿ ಅಥವಾ ಸಿಲ್ಕ್ ನಲ್ಲೇ ಮಾಡಬೇಕು. ಇವರು ಚೀನಾದಿಂದ ಬಾವುಟವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿಗೆ ಇವರ ಉದ್ದೇಶ ಈಡೇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಹೆಚ್ಚಾಗಿದೆ. ಹಾಗಾದರೆ ಇವರ ಆತ್ಮನಿರ್ಭರ ಎಲ್ಲಿ ಯಶಸ್ವಿಯಾಯಿತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಭಾರತದಲ್ಲಿ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಶ್ರೀಲಂಕಾ ದೇಶದ ಆರ್ಥಿಕ ಸ್ಥಿತಿ ಭಾರತಕ್ಕೆ ಬಂದರು ಆಶ್ಚರ್ಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮ ಯಶಸ್ಸಿನಿಂದ ಬಿಜೆಪಿಗೆ ಭಯ : ಅಮೃತ ಮಹೋತ್ಸವ ಯಶಸ್ವಿಯಾಗಿದ್ದಕ್ಕೆ ಬಿಜೆಪಿಯವರು ಟೀಕೆಯನ್ನು ಮುಂದುವರೆಸಿದ್ದು ಕಾರ್ಯಕ್ರಮ ಯಶಸ್ಸಿನಿಂದ ಬಿಜೆಪಿಗೆ ಭಯ ಶುರುವಾಗಿದೆ. ಈ ಭಯದಿಂದ ಇನ್ನೂ ಟೀಕೆಯನ್ನು ಮಾಡುತ್ತಿದ್ದಾರೆ. ಅಹಿಂದ ಮತಗಳನ್ನು ಮತ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಡಿ.ಕೆ ಶಿವಕುಮಾರ ಹೇಳಿಕೆಯಲ್ಲಿ ಸತ್ಯವಿರುತ್ತದೆ. ಅಲ್ಪ ಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ಮತಗಳು ಯಾವಾಗಲೂ ಕಾಂಗ್ರೆಸ್ ಪರ ಇರುತ್ತವೆ. ಆ ಕಾರಣಕ್ಕಾಗಿ ಆ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆದಿರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಒಂದು ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ : ರಾಜ್ಯದಲ್ಲಿ ಮಳೆ ಹಾನಿಯಿಂದ ಒಂದು ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಈ ಬಗ್ಗೆ ನಾವಿನ್ನೂ ಸರ್ವೇ ಮಾಡಿಲ್ಲ, ಸರ್ವೇ ಆದ ನಂತರ ಗೊತ್ತಾಗುತ್ತದೆ. ನಾನು ಚುನಾವಣೆ ಹತ್ತಿರ ಬಂದಾಗ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದರ ಬಗ್ಗೆ ತಿಳಿಸುತ್ತೇನೆ. ಈಗ ಯಾವ ನಿರ್ಧಾರವೂ ಆಗಿಲ್ಲ. ವರುಣದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಯಾಕೆ ಊಹಿಸುತ್ತೀರಿ. ನಾನು ಕಾಂಗ್ರೆಸ್ ನಾಯಕನಾಗಿ ಎಲ್ಲಾ ಕಾರ್ಯಕ್ರಮಗಳಿಗೂ ಹೋಗುತ್ತೇನೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು.
ಓದಿ : ಬಿಬಿಎಂಪಿ ಚುನಾವಣೆ ಪೂರ್ವ ಸಿದ್ಧತೆ: ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧ ಭಾಗದಲ್ಲಿ ಡಿಕೆಶಿ ಸಭೆ