ಮೈಸೂರು : ಬೇಸಿಗೆಯಾದ್ದರಿಂದ ಕುರಿ ಸಾಕಾಣಿಕೆ ಮಾಡುವ ಜನರು ಅವುಗಳಿಗೆ ನೀರು, ಮೇವು ಒದಗಿಸಲು ಊರೂರು ಅಲೆಯುವಂತಾಗಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಮೈಸೂರಿಗೆ ಸುಮಾರು 900 ಕುರಿಗಳೊಂದಿಗೆ ಕುರಿಗಾಹಿಗಳು ಬಂದಿದ್ದು, ಕುರಿಗಳಿಗೆ ಆಹಾರ ಒದಗಿಸಬೇಕಾದರೆ ಪ್ರತಿನಿತ್ಯ 30 ರಿಂದ 40 ಕಿ.ಮೀ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಮ್ಮ ತಾಲೂಕಿನಲ್ಲಿ ಬರಗಾಲ ಇರುವುದರಿಂದ ಕುರಿಗಳಿಗೆ ಮೇವು ಒದಗಿಸಲು ಈ ಕುರಿಗಾಹಿಗಳು ಮೈಸೂರಿನತ್ತ ಮುಖ ಮಾಡಿದ್ದಾರೆ.
ಮೈಸೂರು ನಂಜನಗೂಡು ತಾಲೂಕಿನ ಹಲವು ಗ್ರಾಮಗಳ ಜಮೀನುಗಳತ್ತ ಕುರಿ ಮೇಯಿಸಲು ಹೋಗುವ ಕುರಿಗಾಹಿಗಳು, ಕುರಿ ಪಿಕ್ಕೆ (ಹಿಕ್ಕೆ)ಯನ್ನು ಜಮೀನಿನಲ್ಲಿ ಬಿಡಬೇಕು. ಜಮೀನನಲ್ಲಿರುವ ಹುಲ್ಲನ್ನು ಕುರಿಗಳು ಮೇಯಬೇಕು ಎಂಬ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗೆ ಮೇಯಲು ಬಿಡುವ ಕುರಿಗಳು ಜಮೀನುಗಳ ಅಕ್ಕ ಪಕ್ಕದಲ್ಲಿರುವ ಕೆರೆಕಟ್ಟೆ ಹಾಗೂ ನಾಲೆಗಳಲ್ಲಿ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ.
ಇದನ್ನೂ ಓದಿ: ವಿಷಪೂರಿತ ನೀರು ಕುಡಿದು 30 ಕುರಿಗಳು ದಾರುಣ ಸಾವು
ಕಾಡಂಚಿನ ಪ್ರದೇಶಗಳ ಜಮೀನುಗಳತ್ತ ಕುರಿ ಮೇಯಿಸಲು ಹೋದಾಗ, ಚಿರತೆಗಳ ಕಾಟದಿಂದ ಕುರಿಗಾಹಿಗಳು ಬೆಚ್ಚಿದರೆ, ಕೆಲ ಕುರಿಗಳು ಅವುಗಳಿಗೆ ಬಲಿಯಾಗಿವೆ. ಇನ್ನೂ ಕೆಲವನ್ನು ಕುರಿಗಳ್ಳರು ಕದ್ದೊಯ್ದಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಕುರಿಗಳನ್ನು ಸಾಕುವುದೇ ಕುರಿಗಾಹಿಗಳಿಗೆ ಸವಾಲಾಗಿದೆ.
ಈ ಕುರಿತು ಮಾತನಾಡಿದ ಕುರಿಗಾಹಿ ಮುರುಳಿ, ಶಿರಾ ತಾಲೂಕಿನಲ್ಲಿ ಬರಗಾಲ ಬಂದಿರುವುದರಿಂದ ಕುರಿಗಳಿಗೆ ಮೇವು ಒದಗಿಸುವುದು ಕಷ್ಟವಾಗಲಿದೆ. ಹಾಗಾಗಿ, ನಾವು ಮೈಸೂರಿನತ್ತ ಬಂದಿದ್ದೀವಿ ಎಂದಿದ್ದಾರೆ.