ಮೈಸೂರು: ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಬಳಿ ಇರುವ ಮಸಾಜ್ ಪಾರ್ಲರ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ , ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲಾ ವಿರುದ್ಧದ ಪ್ರಕರಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.
ಬೋಗಾದಿ ರಿಂಗ್ ರಸ್ತೆ ಬಳಿಯ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಘನತೆಗೆ ಧಕ್ಕೆ ತಂದ ಆರೋಪದಡಿ 2017ರ ಅ. 20ರಂದು ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಾಧು ಕೋಕಿಲ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಸಾಧು ಕೋಕಿಲ ಅವರು ತನ್ನ ವಿರುದ್ಧದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲದ ಮೆಟ್ಟಿಲೇರಿದ್ದರು. ಈ ಸಂಬಂಧ ಸಾಧು ಕೋಕಿಲ ಅರ್ಜಿಯನ್ನು ನ್ಯಾಯಮೂರ್ತಿ ಪಿಬಿ ಭಜಂತ್ರಿ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತ್ತು.
ಸಾಧು ವಾದ: ಮೈಸೂರಿನ ಮಸಾಜ್ ಪಾರ್ಲರ್‌ನಲ್ಲಿ ನಡೆದ ಘಟನೆಯ ಬಗ್ಗೆ ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ. ನನ್ನ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ. ನಾನು ಮಸಾಜ್ ಪಾರ್ಲರ್‌ಗೆ ಭೇಟಿ ನೀಡಿಲ್ಲ ಎಂದ ಮೇಲೂ ನನ್ನನ್ನು ಆರೋಪಪಟ್ಟಿಗೆ ಸೇರಿಸಿದ್ದಾರೆ ಎಂಬುದು ನಟ ಸಾಧು ಕೋಕಿಲಾ ಅವರ ವಾದವಾಗಿದೆ.