ಮೈಸೂರು: ಕೆಲಸಕ್ಕೆ ಬಾರದ ಟ್ವೀಟ್ಗಳಲ್ಲಿ ಸಿದ್ದರಾಮಯ್ಯ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಆರ್ಎಸ್ಎಸ್ ಕಂಡರೆ ಭಯ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಲೇವಡಿ ಮಾಡಿದ್ದಾರೆ. ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಭೀತಿಯಲ್ಲಿದ್ದಾರೆ.
ಹಾಗಾಗಿ ಸಿದ್ದರಾಮಯ್ಯ ಸುಖಾಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅನ್ನು ದೊಡ್ಡದನಿಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ ವಕ್ತಾರರಾಗಿದ್ದ ಬ್ರಿಜೇಶ್ ಕಾಳಪ್ಪ ಆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ಲೇವಡಿ ಮಾಡಿದರು.
ವಿಧಾನಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ ರವಿಶಂಕರ್ ಅವರಿಗೆ ಅಭೂತಪೂರ್ವ ಬೆಂಬಲ ಕಂಡುಬರುತ್ತಿದೆ. ಮಂಡ್ಯದಲ್ಲಿಯೂ ಕೂಡ ಬೆಂಬಲ ಸಿಗುತ್ತಿದೆ ಎಂದರೆ ಜನರಿಗೆ ನಮ್ಮ ಪರ ಒಲವಿರುವುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.
ಅವರಿಗೆ ಬೇರೆ ವಿಚಾರಗಳು ಇಲ್ಲ. ಹಾಗಾಗಿ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ಪದೇ ಪದೇ ದೆಹಲಿಗೆ ಹೋಗುತ್ತಾರೆ. ಮತ್ತೆ ಇಲ್ಲಿ ಬಂದು ಡಿಕೆಶಿ ಜೊತೆ ಕುಸ್ತಿ ಮಾಡುತ್ತಾರೆ. ಕಾಂಗ್ರೆಸ್ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹಾಗಾಗಿ ಅವರ ಟ್ವೀಟ್ಗಳಿಗೆ ಉತ್ತರ ಕೊಡದಿರುವುದೇ ಲೇಸು ಎಂದರು.
ಪಠ್ಯ ಪುಸ್ತಕದಲ್ಲಿ ಏನಾದರೂ ತಪ್ಪುಗಳಿದ್ದರೆ ಹೇಳಿ, ಅದನ್ನು ಸರಿಪಡಿಸುತ್ತೇವೆ. ರಾಷ್ಟ್ರಕವಿ ಕುವೆಪುರವರಿಗೆ ಯಾವುದೇ ರೀತಿಯ ಅವಮಾನ ಮಾಡಿಲ್ಲ. ಪ್ರತಿಪಕ್ಷ ನಾಯಕರು ಹಳೆಯ ವಿಚಾರಗಳನ್ನು ಹಿಡಿದು ನೇತಾಡುತ್ತಿದ್ದಾರೆ. ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಅದರ ಬದಲು ಉತ್ತಮ ಸಲಹೆ ಕೊಡಲಿ ಎಂದರು.
ಇದನ್ನೂ ಓದಿ: ಪ್ರಧಾನಿ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿ: ಸಂಸದ ಬಿ.ವೈ ರಾಘವೇಂದ್ರ
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಬಿಜೆಪಿಗೆ ಪ್ರತಿಸ್ಪರ್ಧಿಗಳಿಲ್ಲದೇ ನಡೆಯುತ್ತಿರುವ ಚುನಾವಣೆ. ಅದ್ಭುತ ಜನ ಬೆಂಬಲ ಕಂಡು ಬಂದಿದೆ. ಪರಿಷತ್ಗೆ ಎಲ್ಲ ವರ್ಗದವರೂ ಆಯ್ಕೆಯಾಗುವ ಪ್ರಕ್ರಿಯೆಗಳು ನಡೆಯುತ್ತಿದೆ. ಜೆಡಿಎಸ್, ಕಾಂಗ್ರೆಸ್ನಿಂದ ದುಡ್ಡು ಇರುವವರು ಮಾತ್ರ ಮೇಲ್ಮನೆಗೆ ಹೋಗುತ್ತಿದ್ದರು. ಗುಡ್ಡ ಗಾಡಿನ ಜನರನ್ನು ಮರೆತಿದ್ದರು. ಆದರೆ, ನಾವು ಗುಡ್ಡಗಾಡು ಜನರನ್ನು ಆಯ್ಕೆ ಮಾಡಿ ಕಳುಹಿಸಿಕೊಡುತ್ತಿದ್ದೇವೆ. ಇದು ನಮ್ಮ ವಿಶೇಷ ಸಂಪ್ರದಾಯವಾಗಿದೆ ಎಂದು ತಿಳಿಸಿದರು.