ಮೈಸೂರು: ವರ್ಷದ ಮೊದಲ ಹಾಗೂ ಸುಗ್ಗಿ ಹಬ್ಬವಾದ ಸಂಕ್ರಾಂತಿ ಆಚರಣೆಗೆ ಮೈಸೂರಿನ ಮಾರುಕಟ್ಟೆಯಲ್ಲಿ ಎಳ್ಳು, ಬೆಲ್ಲ ಖರೀದಿ ಜೋರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಮ್ಮ ರಾಸುಗಳಿಗೆ ಪೂಜೆ ಸಲ್ಲಿಸಿ ಹಬ್ಬಕ್ಕೆ ರೈತ ಸಮೂಹ ಸಿದ್ಧತೆ ಮಾಡಿಕೊಂಡಿದೆ. ಸಂಕ್ರಾಂತಿ ಖರೀದಿಗಾಗಿ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದಾರೆ.
ನಗರದ ಪುರಾತನ ಮಾರುಕಟ್ಟೆ, ದೇವರಾಜ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಖರೀದಿಗಾಗಿ ಜನ ಸಮೂಹವೇ ಸೇರಿದ್ದು, ಹಬ್ಬಕ್ಕೆ ಬೇಕಾದ ಸಾಮಾನು ಖರೀದಿ ಮಾಡಿ, ಮನೆಗಳಿಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬಾರಿ ಶಕ್ತಿ ಯೋಜನೆಯಡಿ ಉಚಿತ ಬಸ್ ಸೌಲಭ್ಯವಿರುವುದರಿಂದ ಅತಿ ಹೆಚ್ಚು ಮಹಿಳೆಯರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿರುವುದು ವಿಶೇಷವಾಗಿದೆ.
ಸಂಕ್ರಾಂತಿಯಲ್ಲಿ ಸೂರ್ಯ ತನ್ನ ಪಥ ಬದಲಾವಣೆ ಮಾಡುತ್ತಾನೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ತಮ್ಮ ಬೆಳೆಗಳನ್ನು ಕಟಾವು ಮಾಡಿ, ಹಬ್ಬ ಆಚರಣೆ ಮಾಡುವುದು ಒಂದು ಕಡೆಯಾದರೆ. ನಗರ ಪ್ರದೇಶಗಳಲ್ಲಿ ಮನೆಮನೆಗಳಿಗೆ ತೆರಳಿ, ಎಳ್ಳು ಬೆಲ್ಲ ಹಂಚಿ, ಪರಸ್ಪರ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇಂತಹ ಸಂಕ್ರಾಂತಿಗೆ ಎಳ್ಳು ಬೆಲ್ಲ, ಕಬ್ಬು, ಹೂವು ಹಣ್ಣುಗಳ ಖರೀದಿ ಭರಟೆ ಜೋರಾಗಿ ನಡೆದಿದೆ.
ಗ್ರಾಮೀಣ ಭಾಗದ ಸಂಕ್ರಾಂತಿ ಆಚರಣೆ : ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬವನ್ನು ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ತಮ್ಮ ಕೃಷಿ ಚಟುವಟಿಕೆ ಮುಕ್ತಾಯವಾಗಿ ತಾವು ಬೆಳೆದ ಬೆಳೆಗಳು ಕೈ ಸೇರಿದಾಗ ರೈತರು ಖುಷಿಯಿಂದ ದವಸ ಧಾನ್ಯಗಳನ್ನು ಮನೆಗೆ ತೆಗೆದುಕೊಂಡು ಹೋಗಿ, ತಮ್ಮ ಮನೆಯಲ್ಲಿರುವ ರಾಸುಗಳನ್ನು ಚೆನ್ನಾಗಿ ತೊಳೆದು, ಅವುಗಳಿಗೆ ವಿಶಿಷ್ಟ ಬಣ್ಣಗಳಿಂದ ಅಲಂಕಾರ ಮಾಡಿ ಸಂಕ್ರಾಂತಿ ದಿನ ಕಿಚ್ಚು ಹಾಯಿಸಿ ಸಂತೋಷ ಪಡುತ್ತಾರೆ. ಅದರಿಂದಲೇ ಸಂಕ್ರಾಂತಿಗೆ ಸುಗ್ಗಿ ಹಬ್ಬ ಎಂಬ ಹೆಸರು ಸಹ ಇದೆ.
ಇದನ್ನೂ ಓದಿ : ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಹರಿಹರಪುರದ ಸ್ವಾಮೀಜಿ ಸ್ಪಷ್ಟನೆ