ಮೈಸೂರು : ರಾಷ್ಟ್ರದಲ್ಲಿ ಬಿಜೆಪಿ ಅತಿದೊಡ್ಡ ಶ್ರೀಮಂತ ಪಕ್ಷ ಹಾಗೂ ಆರ್ಎಸ್ಎಸ್ ಅತಿದೊಡ್ಡ ಶ್ರೀಮಂತ ಎನ್ಜಿಓ ಸಂಘಟನೆಯಾಗಿದೆ. ಶತಮಾನದ ಇತಿಹಾಸ ಇರುವ ಕಾಂಗ್ರೆಸ್ಗಿಂತ ಬಿಜೆಪಿ ಹಾಗೂ ಆರ್ಎಸ್ಎಸ್ ಶ್ರೀಮಂತ ಪಕ್ಷವಾಗಲು ಕಾರಣವೇನೆಂದರೆ ಅದು 50 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವುದೇ ಆಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ. ಕೊಲೆ ಬೆದರಿಕೆ, ಕೋಮುವಾದವೇ ಬಂಡವಾಳವಾಗಿದ್ದು, ರಾಜ್ಯ ಮತ್ತು ರಾಷ್ಟ್ರದ ಉದ್ಧಾರಕ್ಕೆ ಅವರ ಕೊಡುಗೆ ಶೂನ್ಯ ಎಂದು ಹರಿಹಾಯ್ದರು.
ಹರಿ ಪ್ರಸಾದ್ ಕಾಂಗ್ರೆಸ್ ಅವರ ಇತಿಹಾಸ ಸೃಷ್ಟಿ ಮಾಡುತ್ತಾರೆ. ಆದರೆ ಬಿಜೆಪಿ ಅವರು ಇತಿಹಾಸವನ್ನು ತಿರುಚುತ್ತಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, 6 ಬಾರಿ ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದುಕೊಟ್ಟಿದ್ದರು. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಅವರು ಬ್ರಿಟಿಷರ ಬೂಟನ್ನು ನೆಕ್ಕುತ್ತಿದ್ದರು, ಹೋರಾಟಗಾರನೇ ಅಲ್ಲ ಎಂದು ಹರಿಪ್ರಸಾದ್ ಕಿಡಿಕಾರಿದರು.
ಬಿಜೆಪಿಯವರಿಗೆ ಗೋಡ್ಸೆ, ಸಾವರ್ಕರ್ ಬಿಟ್ಟರೆ ಮಹಾಪುರುಷರೇ ಸಿಕ್ಕುತ್ತಿಲ್ಲ ಎಂದು ವ್ಯಂಗ್ಯವಾಡಿದ ಬಿ ಕೆ ಹರಿಪ್ರಸಾದ್ ಅವರು ಸಾವರ್ಕರ್ ಒಬ್ಬ ಅಪ್ಪಟ ನಾಸ್ತಿಕರಾಗಿದ್ದರು. ನಾಸ್ತಿಕ ಎಂದೇ ಆತ್ಮ ಚರಿತ್ರೆ ಬರೆದುಕೊಂಡಿದ್ದಾರೆ. ಇಂತಹ ನಾಸ್ತಿಕ ಸಾವರ್ಕರ್ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇಡುವ ಮೂಲಕ ಬಿಜೆಪಿಗರು ಹಿಂದೂ ಧರ್ಮಕ್ಕೆ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ : ಕಮೀಷನ್ ಆರೋಪದ ದಾಖಲೆಯಿದ್ದರೆ ತಕ್ಷಣವೇ ತನಿಖೆಗೆ ಅನುಮತಿ: ಸಚಿವ ಮಾಧುಸ್ವಾಮಿ