ಮೈಸೂರು: ನಗರದ ಮಾನಸ ಗಂಗೋತ್ರಿ ಆವರಣದಲ್ಲಿ ವಾಕಿಂಗ್ ಮಾಡುತ್ತಿದ್ದ ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿಯನ್ನು ಅಪಘಾತದ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಮಾನಸ ಗಂಗೋತ್ರಿಯ ಆವರಣದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದ ಆರ್ ಎನ್ ಕುಲಕರ್ಣಿ (83) ಎಂಬುವರಿಗೆ ಕಾರೊಂದು ಗುದ್ದಿ ಪರಾರಿಯಾಗಿತ್ತು. ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪೊಲೀಸರು ಅಪಘಾತ ಎಂದು ತನಿಖೆ ಆರಂಭಿಸಿದಾಗ ಕೊಲೆ ಎಂಬ ಅನುಮಾನ ಮೂಡಿತ್ತು. ಪೊಲೀಸರು ಅಪಘಾತ ನಡೆದ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಆಗ ನಾಮಫಲಕವಿಲ್ಲದ ಕಾರು ವಾಕಿಂಗ್ ಮಾಡುತ್ತಿರುವ ಕುಲಕರ್ಣಿ ಅವರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವುದು ಗೊತ್ತಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಎಸಿಪಿ ನೇತೃತ್ವದಲ್ಲಿ 3 ತಂಡ ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕಮಿಷನರ್ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಉಡುಪಿ: 12 ವರ್ಷಗಳ ಹಿಂದೆ ಹಾವಿನ ವಿಷದ ಇಂಜೆಕ್ಷನ್ ಚುಚ್ಚಿ ಪತ್ನಿಯ ಕೊಲೆ ಪ್ರಕರಣ: ವೈದ್ಯ ಪತಿ ಖುಲಾಸೆ