ಮೈಸೂರು: ನೆಲಸಮವಾಗಿದ್ದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ-ಹೊಮ್ಮರಗಳ್ಳಿ ರಸ್ತೆಯಲ್ಲಿರುವ ಹುಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ಮೂರ್ತಿಯ ಮರು ಪ್ರತಿಷ್ಟಾಪನೆ ಮಾಡಿ, ಹೋಮ ಹವನ ನಡೆಸಿದರು.
ನಂಜನಗೂಡಿನ ಬಳಿಯ ಹುಚ್ಚುಗಣಿ ಗ್ರಾಮದ ಮಹಾದೇವಮ್ಮ ದೇವಸ್ಥಾನವನ್ನು ಜಿಲ್ಲಾಡಳಿತ ನೆಲಸಮ ಮಾಡಿದ್ದು, ಇದರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಟ್ವಿಟರ್ನಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಸಹ ಹಿಂದೂ ದೇವಾಲಯಗಳನ್ನು ನೆಲಸಮ ಮಾಡುವುದು ಸರಿಯಲ್ಲ ಎಂದು ಪ್ರತಿಭಟನೆ ನಡೆಸಿದ್ದರು.
ಈ ಮಧ್ಯೆ ಏಕಾಏಕಿ ದೇವಾಲಯವನ್ನು ನೆಲಸಮ ಮಾಡಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಮಹದೇವಮ್ಮ ದೇವಾಲಯದ ಶಕ್ತಿ ದೇವತೆ ಮಹದೇವಿ ಮೂರ್ತಿಯನ್ನು ಅದೇ ಜಾಗದಲ್ಲಿ ನಿರ್ಮಾಣ ಮಾಡಲು, ಮೂರ್ತಿ ಪ್ರತಿಷ್ಠಾಪನೆ ಮಾಡಿ ಹೋಮ-ಹವನ ನೆರವೇರಿಸಿದರು.
ನೆಲಸಮವಾಗಿರುವ ಮಹದೇವಮ್ಮ ದೇವಾಲಯವನ್ನು ಮರು ನಿರ್ಮಾಣ ಮಾಡಲು ಗ್ರಾಮಸ್ಥರು ಹಾಗೂ ಸಾರ್ವಜನಿಕರು, ದಾನಿಗಳಿಂದ ದೇಣಿಗೆ ಸಂಗ್ರಹ ಮಾಡಿ ಬೃಹತ್ ದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಏಕಾಏಕಿ ದೇವಾಲಯವನ್ನು ನೆಲಸಮ ಮಾಡಿದ್ದು, ಸರಿಯಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೆಲಸಮಗೊಂಡ ನಂಜನಗೂಡಿನ ಮಹದೇವಮ್ಮ ದೇವಸ್ಥಾನಕ್ಕೆ ಸಂಸದ ಪ್ರತಾಪ್ಸಿಂಹ ಭೇಟಿ
ಏನಿದು ಘಟನೆ?: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ-ಹೊಮ್ಮರಗಳ್ಳಿ ರಸ್ತೆಯಲ್ಲಿರುವ ಹುಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಸ್ಥಾನವನ್ನು ತೆರವುಗೊಳಿಸಲಾಗಿತ್ತು. 30 ವರ್ಷಗಳಿಂದ ಇದ್ದ ಮಹದೇವಮ್ಮ ದೇವಸ್ಥಾನವನ್ನು ಸರ್ಕಾರಿ ಜಾಗದಲ್ಲಿ ದೇವಸ್ಥಾನ ಇದೆ ಹಾಗೂ ರಸ್ತೆ ಬದಿಯಲ್ಲಿ ದೇವಸ್ಥಾನ ತೆರವುಗೊಳಿಸಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು.