ಮೈಸೂರು: ಮಾಜಿ ಸಂಸದೆ ರಮ್ಯಾ ಈವರೆಗೆ ವಿಶ್ರಾಂತಿಯಲ್ಲಿದ್ದರು. ಮತ್ತೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಲತಾ ಅಮರ್ ನಾಥ್ ತಿಳಿಸಿದರು.
ಇವಿಎಂ ತೊಲಗಿಸಿ, ಮತ ಪತ್ರ ಬಳಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಮ್ಯಾ ಇತ್ತೀಚಿಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಷ್ಪಲತಾ ಅವರು, ರಮ್ಯಾ ಸಕ್ರಿಯರಾಗಿದ್ದಾರೆ. ಆದರೆ ಅವರು ಟ್ವಿಟ್ಟರ್ ಖಾತೆಯನ್ನು ಡಿಲಿಟ್ ಮಾಡಿದ್ದಾರೆ ಅಷ್ಟೇ. ಚುನಾವಣೆಯ ಕೆಲಸದಿಂದ ಅವರು ಕೆಲ ದಿನಗಳಿಂದ ವಿಶ್ರಾಂತಿಯಲ್ಲಿದ್ದು, ಮತ್ತೆ ಸಕ್ರಿಯರಾಗುತ್ತಾರೆ ಎಂದರು.
ಈಗ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ಚುನಾವಣೆ ಇಲ್ಲದ ಪ್ರಯುಕ್ತ ರಮ್ಯಾ ಕಾಣಿಸಿಕೊಳ್ಳುತ್ತಿಲ್ಲ. ಅವರಿಗೆ ಹೆಚ್ಚಾಗಿ ಟ್ವಿಟ್ಟರ್ ಖಾತೆಯಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಪಕ್ಷದ ಹಿರಿಯರು ಹೇಳಿದ್ದರಿಂದ ಟ್ವಿಟ್ಟರ್ ಖಾತೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದರು.
ಇಂದು ನಡೆದ ಪೋಸ್ಟ್ ಕಾರ್ಡ್ ಚುಳುವಳಿಯ ಮೂಲಕ 1 ಲಕ್ಷ ಪೋಸ್ಟ್ ಕಾರ್ಡ್ಗಳನ್ನು ರಾಷ್ಟ್ರಪತಿಯವರಿಗೆ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ರವಾನೆ ಮಾಡಿ ಮತ್ತೆ ಚುನಾವಣೆಗೆ ಬ್ಯಾಲೆಟ್ ಪೇಪರ್ಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ. ಇದರ ಅಂಗವಾಗಿ ಪೋಸ್ಟ್ ಕಾರ್ಡ್ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಪುಷ್ಪಲತಾ ಅಮರ್ನಾಥ್ ಇದೇ ವೇಳೆ ತಿಳಿಸಿದರು.
ಇನ್ನು ಕೆಪಿಸಿಸಿ ಪುನಾರಚನೆಯ ಬಗ್ಗೆ ಮಾತನಾಡಿದ ಅವರು, ಪಕ್ಷದಲ್ಲಿ ಆಗಾಗ ಈ ತರಹದ ಬದಲಾವಣೆ ಮಾಡುವುದರಿಂದ ಪಕ್ಷದಲ್ಲಿ ಚುರುಕು ಮುಟ್ಟಿಸುವ ಮೂಲಕ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶದಂತೆ ಪುನಾರಚನೆ ಆಗಲಿದೆ ಎಂದು ಮಾಹಿತಿ ನೀಡಿದರು.