ಮೈಸೂರು: ದಸರಾ ಸಂದರ್ಭದಲ್ಲಿ ಮೊದಲ ಬಾರಿಗೆ ದೀಪಾಲಂಕಾರ ಮಾಡಲಾಗಿದ್ದ ರೈಲ್ವೆ ಮ್ಯೂಸಿಯಂಗೆ ಅಕ್ಟೋಬರ್ ಒಂದೇ ತಿಂಗಳಲ್ಲಿ 10,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
ಈ ಬಾರಿ ಸರಳ ದಸರಾ ಕೈಗೊಂಡ ಹಿನ್ನೆಲೆಯಲ್ಲಿ ಆಚರಣೆ ಕೇವಲ ಅರಮನೆಗೆ ಸೀಮಿತವಾಗಿತ್ತು. ಕೆಲವು ಚಟುವಟಿಕೆಗಳು ನಡೆಯದೇ ಇದ್ದರೂ, ನಗರದ ತುಂಬೆಲ್ಲಾ ದೀಪಾಲಂಕಾರ ಮಾಡಲಾಗಿತ್ತು. ಹಾಗೆಯೇ ರೈಲ್ವೆ ಮ್ಯೂಸಿಯಂಗೂ ಅಲಂಕಾರ ಮಾಡಲಾಗಿತ್ತು.
ರೈಲ್ವೆ ಮ್ಯೂಸಿಯಂ ನವೀಕರಣ ಮಾಡಲೆಂದು ಒಂದು ವರ್ಷ ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈಗ ಪೂರ್ಣ ನವೀಕರಣಗೊಂಡು ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ. ಅಕ್ಟೋಬರ್ನಲ್ಲಿ ಮ್ಯೂಸಿಯಂಗೆ 3,60,000 ರೂ. ಆದಾಯ ಬಂದಿದೆ.
ಜೊತೆಗೆ ಈ ಬಾರಿ ಬಡವರಿಗೆ, ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡಿದ್ದರು. ಮುಂದಿನ ಬಾರಿಗೆ ಇದಕ್ಕಿಂತ ಹೆಚ್ಚು ಜನರನ್ನು ಸೆಳೆಯಲು ತಯಾರಿ ಮಾಡಲಾಗುತ್ತದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್ ಖಿಲ್ಜಿ ತಿಳಿಸಿದರು.