ಮೈಸೂರು: ಕೋವಿಡ್ 19 ನಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ, ವೆಂಟಿಲೇಟರ್ ಗಳಿಲ್ಲದೆ ಸಾಯುತ್ತಿದ್ದಾರೆ. ಹೀಗಾಗಿ ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅದೇ ದುಡ್ಡಿಗೆ ವೆಂಟಿಲೇಟರ್ ತರಿಸಿ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಳ ದಸರಾ ಹೆಸರಲ್ಲಿ ಆಡಂಬರ ಬೇಡ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದರಿಂದ ಮೈಸೂರು ಜನರಿಗೆ ಅಪಮಾನ ಮಾಡಿದಂತೆ. ಜನರ ಸಾವು ನೋವಿನ ನಡುವೆ ಮನರಂಜನೆ ಬೇಕಾ? ಅವರು ಸಾಯೋದು ನೋಡಿ ಮನರಂಜನೆ ಪಡೆಯುವುದಾದರೆ ನಿಮ್ಮಂತ ಮುಟ್ಟಾಳರಿಲ್ಲ ಎಂದು ಕಿಡಿಕಾರಿದರು.
ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಹಾಗೂ ಅಗತ್ಯ ಸೌಲಭ್ಯಗಳಿಲ್ಲದೆ ಹೆಚ್ಚಿನ ಸಮಸ್ಯೆ ಆಗಿದೆ. ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ನಿಂದ 700 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಈ ಸಂದರ್ಭದಲ್ಲಿ ಮನರಂಜನೆ ಎಂಬ ಪದವೇ ಅಪ್ರಸ್ತುತ. ಈಗಲೂ ಕಾಲಮಿಂಚಿಲ್ಲ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ ಎಂದರು.
ಹತ್ತು ಕೋಟಿಯಲ್ಲಿ ಒಂದು ಕೋಟಿ ರಾಜ ಮನೆತನಕ್ಕೆ ನೀಡಿ , ಅವರು ಸಂಪ್ರದಾಯ, ಆಚರಣೆಯನ್ನ ಅದ್ದೂರಿಯಾಗಿ ಮಾಡ್ತಾರೆ. ಉಳಿದ ಒಂಭತ್ತು ಕೋಟಿ ಕೋವಿಡ್ ನಿರ್ವಹಣೆಗೆ ಬಳಸಿ ಎಂದು ಸಲಹೆ ನೀಡಿದ ಅವರು, ಸಿದ್ದರಾಮಯ್ಯ, ಯಡಿಯೂರಪ್ಪಗೆ ಕೊರೊನಾ ಬಂದ್ರೆ ಮಣಿಪಾಲ್ ಗೆ ದಾಖಲಾಗ್ತಾರೆ, ಅದೇ ಜನ ಸಾಮಾನ್ಯರು ಮಾತ್ರ ಬೆಡ್ಗಳು ಸಿಗದೆ ಸಾಯ್ತಾ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಣಕ್ಕೆ ಹಣ ಬಳಸಿದ್ರೆ ಸಹೃದಯಿ ಮುಖ್ಯಮಂತ್ರಿ ಅಂತ ಒಪ್ಪಿಕೊಳ್ಳುತ್ತಿದ್ರು, ಆದ್ರೆ ಮೈಸೂರಿನಲ್ಲಿ ಸಂಗೀತ, ನಾಟಕ, ಕಂಸಾಳೆ ಕಲಾವಿದರು ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ಆರು ತಿಂಗಳಿಗಾಗುವ ರೇಷನ್, ಮೆಡಿಸನ್ ಕಿಟ್ ಕೊಡಬಹುದಿತ್ತು.ಬೇರೆ ರಾಜ್ಯದಿಂದ ಕಲಾವಿದರನ್ನ ಕರೆಸಿದ್ರೆ ನೋಡೋರ್ಯಾರು ಎಂದರು.
ರಾಜ್ಯದೆಲ್ಲೆಡೆ ಪ್ರವಾಹ ಬಂದು ಜನ ಬೀದಿ ಪಾಲಾಗ್ತಿದ್ದಾರೆ. ಮೈಸೂರಿನ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಈ ಹಣ ಬಳಸಿಕೊಂಡಿದ್ರೆ ಹೃದಯವಂತಿಕೆ, ಸಂಸ್ಕಾರ ಹೆಚ್ಚುತ್ತಿತ್ತು ಎಂದು ತಿಳಿಸಿದರು.