ಮೈಸೂರು: ಇಂದಿನಿಂದ ಹುಣಸೂರು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್18ರ ವರೆಗೆ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ನವೆಂಬರ್ 11ರಿಂದ 18ರವರೆಗೆ ಸರ್ಕಾರಿ ರಜೆ ದಿನ ಹೊರತುಪಡಿಸಿ ನಾಮಪತ್ರ ಸಲ್ಲಿಸಬಹುದು. ನವೆಂಬರ್ 19ರಂದು ನಾಮ ಪತ್ರ ಪರಿಶೀಲನೆ ಮಾಡಲಾಗುವುದು. ಡಿಸೆಂಬರ್ 5ರಂದು ಮತದಾನ, ಡಿಸೆಂಬರ್ 9ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಹುಣಸೂರು ಮತಗಟ್ಟೆಯ ವಿವರ: ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 274 ಮತಗಟ್ಟೆಗಳಿದ್ದು, ಒಟ್ಟು 2,26,920 ಮತದಾರರಿದ್ದಾರೆ. ಅದರಲ್ಲಿ 1,14,146 ಪುರುಷ ಮತದಾರರು, 1,12,770 ಮಹಿಳಾ ಮತದಾರರು ಹಾಗೂ ಇತರೆ 4 ಜನ ಮತದಾರರು ಇದ್ದಾರೆ. ಒಟ್ಟು ವಿಶೇಷಚೇತನ ಮತದಾರರ ಪಟ್ಟಿ ಮಾಡಲಾಗಿದ್ದು, ಇದರಲ್ಲಿ 2,535 ವಿಶೇಷ ಚೇತನ ಮತದಾರರಿದ್ದಾರೆ. ಅವರನ್ನು ಮತಗಟ್ಟೆಗೆ ಕರೆತರಲು 43 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇನ್ನು, 274 ಮತಗಟ್ಟೆಗಳಿಗೆ 546 ಬ್ಯಾಲೆಟ್ ಯೂನಿಟ್, 540 ಕಂಟ್ರೋಲ್ ಯೂನಿಟ್, 570 ವಿವಿ ಪ್ಯಾಡ್ಗಳನ್ನು ಬಳಸಲಾಗುವುದು. ಹುಣಸೂರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಲು ಯೋಚನೆ ಮಾಡಲಾಗಿದೆ. ಹುಣಸೂರು ಕ್ಷೇತ್ರದ ವ್ಯಾಪ್ತಿಗೆ ಮಾತ್ರ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬ್ಯಾನರ್, ಫ್ಲೆಕ್ಸ್ಗಳನ್ನು ತೆಗೆಯಲು ಈಗಾಗಲೇ ಸೂಚನೆ ನೀಡಲಾಗಿದೆ. 50 ಸಾವಿರ ರೂ. ಹಣವನ್ನು ಮಾತ್ರ ಸಾಗಿಸಬಹುದಾಗಿದೆ. ಹುಣಸೂರು ಚುನಾವಣೆ ನಡೆಯುವ ಕ್ಷೇತ್ರದ 4 ಕಡೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುವುದು ಎಂದು ಅವರು ವಿವರಿಸಿದರು.