ಮೈಸೂರು: ಮಂಗಳೂರಿನಲ್ಲಿ ಗಲಾಟೆ ಮಾಡಿದವರು ಸಮಾಜಘಾತಕ ಶಕ್ತಿಗಳು, ಇವರು ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳು ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಗಲಾಟೆ ಮಾಡಿದ ಸಿಸಿ ಕ್ಯಾಮೆರಾ ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಪೊಲೀಸರು ಅಲ್ಲಿ ಗಲಾಟೆ ಮಾಡಿದವರು ಯಾರು ಎಂಬುದನ್ನು ತೋರಿಸಿದ್ದಾರೆ. ಅವರು ಅಮಾಯಕರು ಎಂದು ಸಿದ್ದರಾಮಯ್ಯ, ಅವರನ್ನು ರಕ್ಷಣೆ ಮಾಡಲು ಹೋಗಿದ್ದ ರಮೇಶ್ ಕುಮಾರ್ ಈಗ ತಿಳಿದುಕೊಳ್ಳಲಿ. ಅವರ್ಯಾರು ಅಮಾಯಕರಲ್ಲ, ಮುಗ್ಧರಲ್ಲ, ಆಟೋದಲ್ಲಿ ಕಲ್ಲು ತಂದು ಪೊಲೀಸರ ಮೇಲೆ, ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ದಾಳಿ ಮಾಡಿದ್ದಾರೆ. ಇವರೆಲ್ಲ, ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳು ಎಂದು ಆರೋಪಿಸಿದರು.
ಕಾಂಗ್ರೆಸ್ ಹೇಗಾದರೂ ಮಾಡಿ ಗಲಾಟೆ ಸೃಷ್ಟಿಸಿ ಅಲ್ಪಸಂಖ್ಯಾತರನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಲು ಚಡಪಡಿಸುತ್ತಿದೆ ಎಂದ ಅವರು, ಕಾಂಗ್ರೆಸ್ ಕೊಚ್ಚೆಯಲ್ಲಿರುವ ಸೊಳ್ಳೆಯ ತರ, ಅಮಾಯಕರು, ಅನಕ್ಷರಸ್ಥನ್ನು ಇಟ್ಟುಕೊಂಡು ಮೊದಲಿನಿಂದಲೂ ರಾಜಕೀಯ ಮಾಡುತ್ತಿದೆ ಎಂದರು.