ಮೈಸೂರು: ಕಂಪ್ಯೂಟರ್ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕಂಪ್ಯೂಟರ್ ಸರ್ವರ್ ಅನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸಚಿವರ ಈ ರೀತಿಯ ಹೇಳಿಕೆಯಿಂದ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಇಂತಹ ಸಚಿವರಿಗೆ ಓರಿಯೆಂಟೇಷನ್ ಪ್ರೋಗ್ರಾಮ್ ಮಾಡುವ ಅಗತ್ಯವಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತರುವುದನ್ನು ತಡೆಯಲು ಕೇಂದ್ರ ಸರ್ಕಾರ ಕಂಪ್ಯೂಟರ್ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿರುವ ವಿಚಾರದ ಬಗ್ಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಅವರಿಗೆ ಓರಿಯೆಂಟೇಷನ್ ಅಗತ್ಯವಿದೆ. ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂಥ ಸಚಿವರು ಇದ್ದಾರೆ. ಅವರಿಗೆ ಯಾವ ಬಗ್ಗೆಯೂ ಅರಿವಿಲ್ಲದೆ, ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದರು.
ಸಾರ್ವಜನಿಕವಾಗಿ ಏನು ಮಾತನಾಡಬೇಕೆಂದು ಸಚಿವರಿಗೆ ಗೊತ್ತಿಲ್ಲ. ಈ ರೀತಿ ಅಸಂಬದ್ದ ಹೇಳಿಕೆ ಕೊಟ್ಟರೆ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಕಂಪ್ಯೂಟರ್ ಸರ್ವರ್ ಅನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಕರ್ನಾಟಕ ರಾಜ್ಯದ ಪ್ರತಿನಿಧಿ. ಈ ರೀತಿ ಹೇಳಿಕೆ ಕೊಟ್ಟು ಮುಜುಗರಕ್ಕೆ ಒಳಗಾಗಬಾರದು ಎಂದು ವಾಗ್ದಾಳಿ ನಡೆಸಿದರು.
ಶಾಸಕ ಪ್ರದೀಪ್ ಈಶ್ವರ್ ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೊದಲ ಬಾರಿ ಗೆದ್ದ ಪ್ರದೀಪ್ ಈಶ್ವರ್‌ಗಿಂತ 40 ವರ್ಷ ದೊಡ್ಡವರು. ಮೊದಲು ಇಂತವರಿಗೆ ಓರಿಯೆಂಟೇಷನ್ ಕಾರ್ಯಕ್ರಮ ಮಾಡಲಿ. ಇವರು ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತನಾಡಬೇಕು. ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲಿ ಎಂದು ತಿರುಗೇಟು ಕೊಟ್ಟರು.
ಸಚಿವ ಎಂ.ಬಿ. ಪಾಟೀಲ್ ನನ್ನ ಬಗ್ಗೆ ಇನ್ನು ಮುಂದೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಸಹ ಅವರ ಬಗ್ಗೆ ಮಾತನಾಡುವುದಿಲ್ಲ. ಎಂ.ಬಿ. ಪಾಟೀಲ್ ಬಗ್ಗೆ ನನಗೆ ಅಪಾರ ಗೌರವವಿದೆ. ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಜನ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಾವು ಯಾವಾಗಲೂ ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು ಎಂದರು.
ಓಪನ್ ಮಾರ್ಕೆಟ್‌ನಿಂದ ಅಕ್ಕಿ ಖರೀದಿಸಲಿ: ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ನವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿ, ಬೊಬ್ಬೆ ಹಾಕುತ್ತಿದ್ದಾರೆ. ನಿಮಗೆ ಅಕ್ಕಿ ಬೇಕಾದರೆ ಓಪನ್ ಮಾರ್ಕೆಟ್‌ನಲ್ಲಿ ಕೊಂಡುಕೊಳ್ಳಿ. ವಿನಾಕಾರಣ ಮೋದಿಯವರನ್ನು ಬೈದು ತಿರುಗಾಡಬೇಡಿ. ಜನರಿಗೆ ಅಕ್ಕಿ ಕೊಡುತ್ತೇವೆ ಎಂದು ಭರವಸೆ ಕೊಡುವಾಗ ಮೋದಿಯವರನ್ನು ಕೇಳಿ ಭರವಸೆ ಕೊಟ್ಟಿದ್ದೀರಾ?. ನಿಮ್ಮದು ಜನ ವಿರೋಧಿ ಧೋರಣೆಯ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ: ಚನ್ನಗಿರಿಯಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ, ನೀರಿನಲ್ಲಿ ತೇಲಿದ ದ್ವಿಚಕ್ರ ವಾಹನಗಳು