ಮೈಸೂರು: ಮಳಲಿಯ ಸಂಪೂರ್ಣ ದೇವಸ್ಥಾನವನ್ನು ಪಡೆದೇ ಪಡೆಯುತ್ತೇವೆ. ಕಾನೂನಿನ ಪ್ರಕಾರವೇ ದೇವಸ್ಥಾನವನ್ನು ಪಡೆಯುತ್ತೇವೆ. ದೇಶದಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸಹ ನಾವು ಪುನಃ ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿಯ ಹಿಡಿ ಮಣ್ಣು ಸಹ ಕೊಡುವುದಿಲ್ಲ ಎಂಬ ಎಸ್‌ಡಿಪಿಐ ಅಧ್ಯಕ್ಷರ ಮಾತಿಗೆ ಪ್ರತಿಕ್ರಿಯಿಸಿದರು. ಮಳಲಿಯ ಸಂಪೂರ್ಣ ದೇವಸ್ಥಾನ ಪಡೆಯುತ್ತೇವೆ. ಸೌಹಾರ್ದತೆಯಿಂದ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನವನ್ನು ವಾಪಸ್ ಕೊಡಿ ಎಂದರು. ನಮ್ಮ ಧರ್ಮದ ಸಂಪ್ರದಾಯದ ತಾಂಬೂಲ ಪ್ರಶ್ನೆ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಜೋಕೆ. ನಮ್ಮ ಶಾಸ್ತ್ರದ ಬಗ್ಗೆ ಮಾತನಾಡುವವರು ನಾಶವಾಗುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಮಳಲಿ ಮಸೀದಿಯ ಒಂದು ಹಿಡಿ ಮರಳನ್ನು ಸಹ ಬಿಟ್ಟು ಕೊಡುವುದಿಲ್ಲ.. ಅಬ್ದುಲ್ ಮಜೀದ್ ಸವಾಲು
ಮತ್ತೆ ಹಿಜಾಬ್ ವಿವಾದವನ್ನು ಕೆರಳಿಸುತ್ತಿರುವುದರ ಹಿಂದೆ ದೊಡ್ಡ ಅಜೆಂಡಾ ಇದೆ. 6 ವಿದ್ಯಾರ್ಥಿನಿಯರ ಭವಿಷ್ಯವನ್ನು ಹಾಳು ಮಾಡುತ್ತಿರುವುದರ ಹಿಂದೆ ಪಿಎಫ್ಐ, ಸಿಎಫ್ಐ, ಎಸ್‌ಡಿಪಿಐ ಕೈವಾಡವಿದೆ. ಇದರ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಕೇವಲ ಈ ಆರು ಜನ ವಿದ್ಯಾರ್ಥಿನಿಯರ ಜೀವನವನ್ನು ಹಾಳು ಮಾಡುವುದಷ್ಟೇ ಅಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡುವಂತಹ ನೀಚ ನಿರ್ಲಜ್ಜತನವನ್ನು ಕೆಲವರು ತೋರುತ್ತಿದ್ದಾರೆ. ಹಿಜಾಬ್ ಬಗ್ಗೆ ಕೋರ್ಟ್ನಲ್ಲಿ ಏನು ಹೇಳಿದ್ದಾರೆಯೋ ಅದನ್ನು ಪಾಲಿಸಬೇಕು, ಕೋರ್ಟ್ ಆದೇಶವನ್ನು ಪಾಲಿಸದೇ ಮತ್ತೆ ಮತ್ತೆ ಉದ್ಧಟತನ ತೋರುತ್ತಿರುವುದರ ಹಿಂದೆ ಯಾವುದೋ ಒಂದು ಶಕ್ತಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿನಿಯರಿಗೆ ಬ್ರೈನ್ ವಾಶ್ ಮಾಡಿ ಅವರನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.