ಮೈಸೂರು: 90 ವರ್ಷಗಳಿಂದ ಜಮೀನಿನಲ್ಲಿ ವಾಸವಿರುವವರನ್ನು ಒಕ್ಕಲೆಬ್ಬಿಸಲು ಗ್ರಾಮದ ಕೆಲವರು ಹುನ್ನಾರ ನಡೆಸಿರುವ ಆರೋಪದ ಮೇಲೆ ಬಡ ಕುಟುಂಬದವರು ದಯಾಮರಣ ಕೋರಿ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದಾರೆ. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಖರಾಬು ಜಮೀನಿನಲ್ಲಿ ಯುವತಿ ಜ್ಯೋತಿ ಎಂಬುವರ ಬಡ ಕುಟುಂಬ ಮುತ್ತಾತನ ಕಾಲದಿಂದಲೂ ವಾಸವಿದೆ. ಸರ್ವೇ ನಂಬರ್ 39ರಲ್ಲಿ ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇನ್ನುಳಿದ 18 ಗುಂಟೆ ಪ್ರದೇಶದಲ್ಲಿ ವಾಸವಿದ್ದ ಜಮೀನಿನಲ್ಲಿ ಗ್ರಾಮದ ಕೆಲವರು ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಂದು ಎಕರೆ ಜಮೀನು ಸ್ವಾಧೀನಕ್ಕೆ ಪಡೆದಿದ್ದಾರೆ. ಉಳಿದ 18 ಗುಂಟೆ ಜಮೀನಿನಲ್ಲಿ ಕಾಳು ಹಾಕಿ ಜೀವನ ನಡೆಸುತ್ತಿದ್ದೇವೆ. ಈಗ ನಮ್ಮನ್ನು ಒಕ್ಕಲೆಬ್ಬಿಸಿ, ಆ ಜಾಗದಲ್ಲಿ ಅಡುಗೆ ಮನೆ ನಿರ್ಮಿಸಲು ಮುಂದಾಗಿದ್ದು, ಕಿರುಕುಳ ನೀಡುತ್ತಿದ್ದಾರೆಂದು ಜ್ಯೋತಿ ಆರೋಪಿಸಿದ್ದಾರೆ.
ಆ ಜಾಗದಲ್ಲಿ ಜನತಾ ಮನೆ ನಿರ್ಮಿಸಲು ಮಂಜೂರಾತಿ ಪತ್ರ ದೊರೆತಿದೆ. ವಾಸದ ಮನೆ ಕಾಮಗಾರಿ ನಿರ್ಮಾಣವನ್ನು ಕೂಡ ಪ್ರಾರಂಭ ಮಾಡಲಾಗಿದೆ. ಆದರೆ, ಗ್ರಾಮದ ಕೆಲವರ ಕಿರುಕುಳಕ್ಕೆ ಬೇಸತ್ತು ದಯಾಮರಣ ಕೋರಿ ಪತ್ರ ಬರೆದಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿಂದ ನಾವು ಜಾಗ ಖಾಲಿ ಮಾಡುವುದಿಲ್ಲ. 90 ವರ್ಷಗಳಿಂದ ಬದುಕಿರುವ ಜಾಗದಲ್ಲೇ ಇರಲು ಅವಕಾಶ ಮಾಡಿಕೊಡಬೇಕು ಎಂದು ಯುವತಿ ಜ್ಯೋತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಯಾಮರಣಕ್ಕೆ ಅರ್ಜಿ ಹಾಕಿದ ಯುವತಿಯ ಕುಟುಂಬಸ್ಥರ ಸಮಸ್ಯೆ ಆಲಿಸಿರುವ ತಹಶಿಲ್ದಾರ್, ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಅಲ್ಲದೆ, ಗ್ರಾಮದ ಜನರು ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಸಾಶನಕ್ಕಾಗಿ 5 ಕಿ.ಮೀ ದೂರ ತೆವಳಿದ ವೃದ್ಧೆ; ಗ್ಯಾರಂಟಿ ಕೊಟ್ಟ ಸರ್ಕಾರಕ್ಕೆ ಕರುಣೆ ಇಲ್ಲವೇ?-ಹೆಚ್ಡಿಕೆ