ಮೈಸೂರು: ಆರ್ಥಿಕ ಸಂಕಷ್ಟದ ನಡುವೆ ದೇಶವನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿಗಿಂತ ಬುದ್ಧಿವಂತರು ಯಾರಿದ್ದಾರೆ ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಆಡಳಿತ ತೃಪ್ತಿ ತಂದಿದೆ. ವಿಶ್ವವನ್ನೇ ಕೊರೊನಾ ತಲ್ಲಣಗೊಳಿಸಿದೆ. ಇಂತಹ ಸಂದರ್ಭದಲ್ಲಿ ದೇಶವನ್ನು ಮೋದಿ ನಿಭಾಯಿಸಿದ್ದಾರೆ. ರಾಜ್ಯಕ್ಕೆ ಜಿಎಸ್ಟಿ ಕೊಟ್ಟಿಲ್ಲ ಅಂತ ಯಾಕೆ ದೂಷಿಸಬೇಕು. ರಾಜ್ಯದ ಪಾಲಿನ ಜಿಎಸ್ಟಿ ಹಣವನ್ನು ಬೇರೆ ಬೇರೆ ರೂಪದಲ್ಲಿ ಕೊಟ್ಟಿದ್ದಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದು ಸಮರ್ಥಿಸಿಕೊಂಡಿದ್ದಾರೆ.
ಮೋದಿ ಅವರು ಏನೇ ಮಾಡಿದರು ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ರಾಹುಲ್ ಗಾಂಧಿ ಅವರು ಚೀನಾ ಗಡಿ ವಿಚಾರದಲ್ಲಿ ಟೀಕೆ ಮಾಡಿದ್ದಾರೆ. ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸವಲ್ಲ. ಆಡಳಿತದ ಬಗ್ಗೆ ಸಲಹೆ ಕೊಡಲಿ ಎಂದರು.
ಡ್ರಗ್ಸ್ ಸೇವನೆಯಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಮೋದಿ ಅವರನ್ನು ಮಾದರಿಯಾಗಿ ಇಟ್ಟುಕೊಂಡ್ರೆ ಯುವಕರು ದಿನದಲ್ಲಿ 18 ಗಂಟೆ ಕೆಲಸ ಮಾಡಬೇಕು. ಆದರೆ ಡ್ರಗ್ಸ್ನಿಂದ ಯುವಕರು ಹಾಳಾಗುವುದಕ್ಕೂ ಮೋದಿಗೂ ಯಾವುದೇ ಸಂಬಂಧವಿಲ್ಲ ಎಂದರು.