ಮೈಸೂರು: ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಂಜನಗೂಡಿನ ತಾಂಡವಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಸುತ್ತಲಿನ ಜನರು ಭಯಭೀತರಾಗಿದ್ದು, ತೋಟ ಗದ್ದೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಗ್ರಾಮದ ಯುವಕ ರಘು ಮತ್ತು ರೇವಣ್ಣ ಹಾಗೂ ರೈತ ಮಹಾದೇವ ಅವರು ಭಾನುವಾರ ಬೆಳಿಗ್ಗೆ ಹುಲಿ ಕಂಡು ಗಾಬರಿಗೊಂಡಿದ್ದರು. ಕೂಡಲೇ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮಸ್ಥರ ಹೇಳಿಕೆಯಂತೆ ಹುಲಿ ಓಡಾಡಿರುವ ಮಾರ್ಗದಲ್ಲಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರು. ಆದರೆ ಹುಲಿ ಹೆಜ್ಜೆ ಗುರುತು ಸಿಗದೆ ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಅಧಿಕಾರಿಗಳು ರೈತ ಮಹೇಶ ಹಾಗೂ ಕರಿಗೌಡರ ಜಮೀನುಗಳಲ್ಲಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರು. ಆದರೆ ಇಲ್ಲಿ ಹುಲಿಯ ಬದಲು ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಇದ್ದರೂ ಇರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.
ಹಳ್ಳಿದಿಡ್ಡಿಯಲ್ಲಿ ಹುಲಿ ಸೆರೆಗೆ ಬೋನು: ಚಿರತೆ ಮತ್ತು ಹುಲಿ ಎರಡೂ ಕೂಡ ಒಂದೇ ಕಡೆ ಇರುವುದಿಲ್ಲ. ಇತ್ತೀಚೆಗೆ ಹಳ್ಳಿದಿಡ್ಡಿಯಲ್ಲಿ ಹುಲಿಯೊಂದು ಕರುವನ್ನು ಕೊಂದು ಹಾಕಿತ್ತು. ಇದೇ ಜಾಗದಲ್ಲಿ ಹುಲಿ ಸೆರೆ ಹಿಡಿಯುವ ಬೋನು ಇಡಲಾಗಿದೆ. ಸತ್ತಿರುವ ಕರುವನ್ನು ಬೋನಿನಲ್ಲಿ ಇಡಲಾಗಿದೆ. ಅಲ್ಲಿಗೆ ಬಂದರೂ ಬರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಂಡವಪುರ ಸುತ್ತಮುತ್ತಲಿನ ಜಮೀನುಗಳಿಗೆ ಹೋಗುವಾಗ ಒಬ್ಬೊಬ್ಬರೇ ಹೋಗಬೇಡಿ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂಓದಿ: ಹಾವೇರಿ: ಮುಂದುವರಿದ ಕಾಡಾನೆ ಹಾವಳಿ, ಕಟಾವಿಗೆ ಬಂದ ಬೆಳೆ ನಾಶ VIDEO