ಮೈಸೂರು: ಯಾವುದೇ ಧರ್ಮದ ಜನರನ್ನು ಅಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡುವುದಕ್ಕೆ ನನ್ನ ವಿರೋಧವಿದೆ. ಸುಪ್ರೀಂಕೋರ್ಟ್ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಧರ್ಮದ ಜನರನ್ನು ಬಲವಂತವಾಗಿ ಮತಾಂತರ ಮಾಡಬಾರದು. ಸಂವಿಧಾನದ 25ನೇ ವಿಧಿಯ ಅನ್ವಯ ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದೆ. ಯಾರು ಯಾವ ಧರ್ಮ ಬೇಕಾದರೂ ಪಾಲನೆ ಮತ್ತು ಅನುಸರಣೆ ಮಾಡಬಹುದು ಎಂದರು.
ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬೇಡ, ಸ್ವಪಕ್ಷಿಯರೇ ಸೋಲಿಸುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ನಾನು ಉತ್ತರ ಕೊಡುವುದಿಲ್ಲ. ಜನರ ಸಮಸ್ಯೆ ಇದ್ದರೆ ಕೇಳಿ. 8 ಬಾರಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಸೋಲು ಗೆಲುವಿನ ತೀರ್ಮಾನ ಮಾಡುವುದು ಜನ ಎಂದರು.
ಕೆಡವಲು ಇವನ್ಯಾರು? ಸಂಸದರಿಗೆ ಏಕವಚನದಲ್ಲೇ ಕ್ಲಾಸ್: ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣ ತೆರವು ಮಾಡುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. 2 ಬಾರಿ ಸಂಸದರಾಗಿರುವ ಈ ವ್ಯಕ್ತಿ ಬೇಜವಾಬ್ದಾರಿಯುತವಾಗಿ ವರ್ತಿಸುವುದು ಸರಿಯಲ್ಲ. ಸರ್ಕಾರ ಖರ್ಚು ಮಾಡಿ ಕಟ್ಟಿಸಿರುವುದು, ಇವನ್ಯಾರು ಕೆಡವಲು?. ಇವನ ದುಡ್ಡಿನಿಂದ ನಿರ್ಮಿಸಿಲ್ಲ. ಹೀಗೆ ನಿರ್ಮಾಣ ಮಾಡಬೇಕು ಎಂದು ಎಲ್ಲಿ ಇದೆ. ನಿರ್ಮಾಣ ಮಾಡಿರುವುದು ಖಾಸಗಿ ಇಂಜಿನಿಯರ್ ಅಲ್ಲ, ಸರ್ಕಾರಿ ಇಂಜಿನಿಯರ್. ಕಟ್ಟುವಾಗ ನಿಮಗೆ ಅದರ ಬಗ್ಗೆ ಅರಿವು ಇರಲಿಲ್ಲವೇ, ಗುಂಬಜ್ ತರ ಇರಬಾರದು ಎಂದು ಎಲ್ಲಾದರೂ ಇದೆಯಾ. ಈ ರೀತಿ ಇರುವ ಎಲ್ಲಾ ಕಟ್ಟಡಗಳನ್ನಿ ಒಡೆದು ಹಾಕುತ್ತಾರಾ ಎಂದು ಪ್ರಶ್ನಿಸಿದರು.
600 ವರ್ಷಗಳ ಕಾಲ ಮೊಘಲರ ಆಳ್ವಿಕೆಯಲ್ಲಿ ಈ ರೀತಿ ನಡೆದಿದೆ. ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು. ಕೇವಲ ಮತಕ್ಕಾಗಿ ಈ ರೀತಿ ಬಿಜೆಪಿಯವರು ಮಾಡುತ್ತಿದ್ದಾರೆ. ರಾಜ್ಯದ ಜನರು ಬುದ್ಧಿವಂತರಿದ್ದಾರೆ ಎಂದು ಹೇಳಿದರು.
ಚುನಾವಣಾ ಪಟ್ಟಿ ಬಿಡುಗಡೆಗೆ ಸಿದ್ಧತೆ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನ ಮೊದಲ ಹಂತದ ಚುನಾವಣಾ ಪಟ್ಟಿಯನ್ನು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಚುನಾವಣಾ ಪ್ರಚಾರಕ್ಕೆ ಬಸ್ ಸಿದ್ಧಗೊಳ್ಳುತ್ತಿದೆ. ಮೊನ್ನೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ನಾನು ಮತ್ತು ಡಿ.ಕೆ ಶಿವಕುಮಾರ್ ಎರಡು ಭಾಗವಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಎರಡು ತಂಡ ಪ್ರವಾಸ ಕೈಗೊಂಡು ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಹಾಗೂ ಮೋಸದ ಬಗ್ಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು. ಇನ್ನು, ಯಾತ್ರೆಗೆ ಸಂಬಂಧಿಸಿದ ದಿನಾಂಕ ನಿಗದಿಯಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?