ಮೈಸೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುದ್ದಲಿ ಪೂಜೆ ನೆರವೇರಿಸಿರುವ ಘಟನೆ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ಕಂಡುಬಂದಿದೆ.
ವರಕೊಡು ಗ್ರಾಮಕ್ಕೆ ಬೀರೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಗುದ್ದಲಿ ಪೂಜೆ ನೆರವೇರಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಅವರ ಹಿಂದೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದಾರೆ. ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಾರ, ತುರಾಯಿ ಹಾಕಲು ಕಾರ್ಯಕರ್ತರು ಮುಗಿಬಿದ್ದ ಕಾರಣ ಸಾಮಾಜಿಕ ಅಂತರ ಮಂಗಮಾಯವಾಗಿತ್ತು.
ಧಾರ್ಮಿಕ ಆಚರಣೆಗಳಿಗೆ ನಮ್ಮ ವಿರೋಧವಿಲ್ಲ. ದೇವಸ್ಥಾನ ಜೀರ್ಣೋದ್ಧಾರಕ್ಕೆ ನನ್ನ ಸಹಮತವಿದೆ. ಕೋವಿಡ್ 19 ದೇಶಾದ್ಯಂತ ವ್ಯಾಪಕವಾಗಿ ಹರಡಿದೆ. ಎಲ್ಲರೂ ಸಾಮಾಜಿಕ ಅಂತರ ಪಾಲನೆ ಮಾಡಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂಬ ಮಾಹಿತಿ ತಿಳಿದಿದ್ದರೆ ಈ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.