ಮೈಸೂರು: ವ್ಯಾಕ್ಸಿನ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಅವನ್ನು ಬಗೆಹರಿಸಬೇಕು, ಅದನ್ನು ಬಿಟ್ಟು ರಾಜಕೀಯ ಮಾಡಬಾರದು ಅಂತಾ ಮಾಜಿ ಸಂಸದ ಧ್ರುವನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಬಾರದು. ಲಸಿಕೆ ಬಗ್ಗೆ ನಿತ್ಯ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಈ ಬಗ್ಗೆ ಕೇಂದ್ರದ ಆರೋಗ್ಯ ಸಚಿವರು ಸ್ಪಷ್ಟೀಕರಣ ನೀಡಬೇಕು. ಲಸಿಕೆಯಲ್ಲಿ ಈವರೆಗೆ ಯಾವ ರೀತಿಯ ಪ್ರಯೋಗಗಳು ನಡೆದಿವೆ, ಯಾವಾಗ ಬಿಡುಗಡೆಯಾಗುತ್ತದೆ ಎಂಬ ಜನರಿಗಿರುವ ಗೊಂದಲಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಅಂತಾ ಆಗ್ರಹಿಸಿದರು.
ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನ..
ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ಗಿಂತ ಕಾಂಗ್ರೆಸ್ ಬೆಂಬಲಿಗರು ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದಾರೆ. ಫಲಿತಾಂಶದ ದಿನ ಮಧ್ಯರಾತ್ರಿವರೆಗೂ ಮತ ಎಣಿಕೆ ನಡೆಯುತ್ತಿತ್ತು. ಬಿಜೆಪಿಯವರು ಫಲಿತಾಂಶ ಮುಗಿಯುವ ಮುನ್ನವೇ ನಮ್ಮ ಪಕ್ಷದ ಬೆಂಬಲಿಗರು ಹೆಚ್ಚು ಸ್ಥಾನಗಳಿಸಿದ್ದಾರೆ ಅಂತಾ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿತ್ತು ಎಂದು ವ್ಯಂಗ್ಯವಾಡಿದರು.
ಗ್ರಾ.ಪಂ ಚುನಾವಣಾ ಫಲಿತಾಂಶದಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಮುಂದಿದೆ. 129 ಗ್ರಾಪಂಗಳ ಪೈಕಿ 76ರಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಜಿಲ್ಲೆಯಲ್ಲಿ 2,159 ಅಭ್ಯರ್ಥಿಗಳ ಪೈಕಿ 1,135 ಮಂದಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೈಸೂರಿನಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಜನ ಮಣೆ ಹಾಕಿದ್ದಾರೆ. ಈ ಎರಡು ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದೆ ಎಂದು ಮಾಜಿ ಸಂಸದ ಆರ್ ಧ್ರುವನಾರಾಯಣ್ ಹೇಳಿದರು .
ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನೆಲೆ, ಮಾಜಿ ಸಿಎಂ ಸಿದ್ದರಾಮಯ್ಯ ಸಾರಥ್ಯದಲ್ಲಿ "ಗ್ರಾಮ ಜನಾಧಿಕಾರ ಸನ್ಮಾನ" ಕಾರ್ಯಕ್ರಮ ಇದೇ ತಿಂಗಳ 13 ರಂದು ವರುಣ ಕ್ಷೇತ್ರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ನೀಲಿನಕ್ಷೆ ಸಿದ್ಧವಾಗಲಿದೆ. ಹೆಚ್.ಡಿಕೋಟೆ, ಕೆ.ಆರ್ ನಗರ, ನಂಜನಗೂಡು ಹಾಗೂ ವರುಣ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾಮ ಜನಾಧಿಕಾರ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.