ಮೈಸೂರು: ಹದಿನಾರು ಗ್ರಾಮಕ್ಕೆ ಪ್ರವಾಸಿಗರನ್ನು ಸೆಳೆಯಬೇಕು ಎಂದು ಕೆರೆಯ ಅಭಿವೃದ್ಧಿಗಾಗಿ 1 ಕೋಟಿ ರೂ. ಖರ್ಚು ಮಾಡಲಾಗಿತ್ತು. ಆದರೆ ಆ ಶ್ರಮವೆಲ್ಲ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ 100 ಎಕರೆ ಪ್ರದೇಶದಲ್ಲಿರುವ ಕೆರೆಗೆ ಜೊಂಡು ಆವರಿಸಿಕೊಂಡು ನೀರು ಖಾಲಿಯಾಗುತ್ತಿದೆ. ಆದ್ರೆ ಮತ್ತೊಂದೆಡೆ ಪ್ರವಾಸೋದ್ಯಮ ಇಲಾಖೆಗೂ ಬಳಕೆಯಾಗಬೇಕಿದ್ದ ಕೆರೆ ಹಾಗೆಯೇ ಉಳಿದುಕೊಂಡಿದೆ.
ಡಾ. ಹೆಚ್.ಸಿ.ಮಹದೇವಪ್ಪ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ತಮ್ಮ ಹುಟ್ಟೂರು ಗ್ರಾಮವಾದ ಹದಿನಾರು ಗ್ರಾಮದಲ್ಲಿ ಕೆರೆ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾಡಲು 1 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು. ಅದು ಹಾಗೆಯೇ ಉಳಿದುಕೊಂಡಿದೆ.
ಇನ್ನು ಕೆರೆಯ ಸುತ್ತ ಬೆಲಿ ಹಾಕಿರುವುದರಿಂದ ಕೆರೆಯ ಬಳಿಗೆ ಯಾರು ಹೋಗಲು ಆಗುತ್ತಿಲ್ಲ ಹಾಗೂ ಜಾನುವಾರುಗಳಿಗೂ ನೀರಿನ ಉಪಯೋಗವೂ ಆಗುತ್ತಿಲ್ಲ. ಇತ್ತ ಗ್ರಾಮಸ್ಥರು ಸಹ ಮನೆಯ ನಲ್ಲಿ ನೀರನ್ನೆ ಆಶ್ರಯಿಸುವಂತಾಗಿದೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾದ ಪರಿಣಾಮ ಕೆರೆಯಲ್ಲಿ ನೀರು ಇದ್ದರೂ ಸಹ ಗ್ರಾಮಸ್ಥರಿಗೂ, ಜಾನುವಾರುಗಳಿಗೆ ನೀರಿನ ಸದ್ಬಳಕೆಯಾಗುತ್ತಿಲ್ಲ.
ಡಾ. ಹೆಚ್.ಸಿ.ಮಹದೇವಪ್ಪನವರು ತಮ್ಮ ಹುಟ್ಟೂರಿನ ಕಡೆ ಕೊಂಚ ಗಮನ ಹರಿಸಿ ಪ್ರವಾಸೋದ್ಯಮಕ್ಕೆ ಅಲ್ಲದಿದ್ದರೂ ಗ್ರಾಮಸ್ಥರಿಗಾದರು ಕೆರೆ ಉಪಯೊಗವಾಗುವಂತೆ ಮಾಡಬೇಕು ಎಂಬುವುದು ಗ್ರಾಮಸ್ಥರ ಮಾತು.