ಮೈಸೂರು: ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಪ್ರಕರಣ ಇದುವರೆಗೂ ದೃಢವಾಗಿಲ್ಲ. ಆದರೂ ಮುನ್ನಚ್ಚರಿಕೆ ಕ್ರಮವಾಗಿ ಕೆ.ಆರ್.ಆಸ್ಪತ್ರೆ, ಜೆಎಸ್ಎಸ್ ಹಾಗೂ ರೈಲ್ವೆ ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯುಳ್ಳ ಕೊಠಡಿಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಇಲ್ಲಿನ ಅರಮನೆ ಮಂಡಳಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡಸಿ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 234 ವ್ಯಕ್ತಿಗಳನ್ನು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 165 ಶಂಕಿತರು ಮನೆಯಲ್ಲಿದ್ದಾರೆ. 69 ಜನ ಸಹಜ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಯಾರಿಗೂ ಪಾಸಿಟಿವ್ ವರದಿ ಬಂದಿಲ್ಲ ಎಂದು ವಿವರಿಸಿದರು.
ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದ್ದ ಪರೀಕ್ಷೆಗಳಲ್ಲಿ 29 ವರದಿ ನೆಗೆಟಿವ್ ಬಂದಿವೆ. ಈ ವೈರಸ್ ತಡೆಗೆ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮುಂಜಾಗ್ರತಾ ಕ್ರಮವಾಗಿ 12 ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ಕೇಂದ್ರಗಳನ್ನು ಗುರುತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ನೋಡಿ ಬಳಸಿಕೊಳ್ಳಲಾಗುವುದು. ಜಿಲ್ಲಾಧಿಕಾರಿ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಅಧಿಕಾರಿಗಳ ಟಾಸ್ಕ್ ಫೋರ್ಸ್ ಕೆಲಸ ಮಾಡುತ್ತಿದೆ. ಮೈಸೂರು ಹಾಗೂ ಕೊಡಗು ಜಿಲ್ಲೆಗಳಿಗೆ ಹೊಂದಿಕೊಂಡಂತೆ ಕೇರಳದ ಗಡಿ ಭಾಗಗಳನ್ನು ಶನಿವಾರದಿಂದ ಬಂದ್ ಮಾಡಲಾಗುವುದು. ಈ ಮೂಲಕ ಬರುವವರು ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯಡಿ ಕೇಂದ್ರ ಸರ್ಕಾರ ₹184 ಕೋಟಿ ಬಿಡುಗಡೆ ಮಾಡಲಿದೆ. ಮಾರ್ಚ್ 22ರಂದು ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.