ಮೈಸೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ವಾರ್ಷಿಕ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ದೇಶದ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 19ನೇ ರ‍್ಯಾಂಕ್ ಮತ್ತು ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರೀಸರ್ಚ್ ಸಂಸ್ಥೆ 34ನೇ ರ‍್ಯಾಂಕ್ ಪಡೆದಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ದೇಶದಲ್ಲಿರುವ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಮತ್ತು ಭೌತಿಕ ಗುಣಮಟ್ಟವನ್ನು ಆಧರಿಸಿ ಎನ್‌ಐಆರ್‌ಎಫ್ ಪ್ರತಿ ವರ್ಷ ಅತ್ಯುತ್ತಮವಾದ 100 ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ 52.68 (19 ರ‍್ಯಾಂಕ್) ಅಂಕ ಲಭಿಸಿದೆ.
2020ನೇ ಸಾಲಿನಲ್ಲಿ 27ನೇ ರ್ಯಾಂಕ್ ಪಡೆದಿತ್ತು, 2021ನೇ ಸಾಲಿನಲ್ಲಿ 19ನೇ ರ‍್ಯಾಂಕ್ ಪಡೆಯುವ ಮೂಲಕ ರ್ಯಾಂಕ್ ಪಟ್ಟಿಯಲ್ಲಿ ಮೇಲೇರಿದೆ. ಮೈವಿವಿಯ ರ‍್ಯಾಂಕ್ ಸುಧಾರಣೆಯಾಗಿರುವುದರಿಂದ ನ್ಯಾಕ್ ಸಮಿತಿಯು ಸೆ.14ರಂದು ಭೇಟಿ ನೀಡುತ್ತಿರುವುದರಿಂದ ತನ್ನ ಗರಿಮೆ ಹೇಳಿಕೊಳ್ಳಲು ಮೈವಿವಿ ಆಡಳಿತ ಮಂಡಳಿಗೆ ಅನುಕೂಲವಾಗಲಿದೆ.
ಸಂಶೋಧನೆ, ಕಲಿಕೆ ಮತ್ತು ಸಂಪನ್ಮೂಲ, ಸಂಶೋಧನೆ ಮತ್ತು ವೃತ್ತಿಕೌಶಲ ತರಬೇತಿ, ವಿವಿಯಿಂದ ಹೊರಬಂದಿರುವ, ಬರುವ ಪದವೀಧರರು, ಔಟ್‌ರೀಚ್ ಮತ್ತು ಆಂತರಿಕ ಕಾರ್ಯಕ್ರಮಗಳ ಮಾನದಂಡಗಳನ್ನು ಆಧರಿಸಿ ರ‍್ಯಾಂಕ್ ನೀಡಲಾಗಿದೆ.