ಮೈಸೂರು : ಕೊರೊನಾ ಸಂಕಷ್ಟದಲ್ಲಿ ಜನರಿಂದ ದೇಣಿಗೆ ಪಡೆದು ಮೃಗಾಲಯದ ಪ್ರಾಣಿಗಳನ್ನು ಸಾಕುತ್ತಿರುವ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಿಗೆ ಹೊಸ ಕಾರು ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಸಂಕಷ್ಟದಿಂದ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸಾಕಲು ಕಷ್ಟವಾಗಿದೆ. ಇದರಿಂದ ದತ್ತು ಯೋಜನೆ ಮೂಲಕ ಸಚಿವರು, ಸಿನಿಮಾ ನಟರು ಸಾರ್ವಜನಿಕರು ಕೋಟ್ಯಂತರ ರೂಪಾಯಿ ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯದ ಪ್ರಾಣಿಗಳಿಗೆ ಸಹಾಯ ಮಾಡಿದ್ದಾರೆ.
ಇಂತಹ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರು 21 ಲಕ್ಷ ಮೌಲ್ಯದ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಇದು ಬೇಕಿತ್ತಾ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಅಧ್ಯಕ್ಷರ ಸ್ಪಷ್ಟನೆ : ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮಹದೇವಸ್ವಾಮಿ, ನಾನು ಜನರ ದೇಣಿಗೆ ದುಡ್ಡಲ್ಲಿ ಹೊಸ ಕಾರು ಖರೀದಿಸಿಲ್ಲ. ನಾನು 7 ವರ್ಷ ಹಳೆಯ ಕಾರನ್ನು ಬಳಸುತ್ತಿದ್ದೆ.
ಆದರೆ, 147ನೇ ಆಡಳಿತ ಮಂಡಳಿಯ ಸಭೆಯಲ್ಲಿ ಹೊಸ ಕಾರು ಖರೀದಿಗೆ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಕಾರು ಬಂದಿದೆ. ಇದು ನನ್ನ ನಿರ್ಣಯ ಅಲ್ಲ. ನನ್ನದು ಮೃಗಾಲಯಗಳ ಅಭಿವೃದ್ಧಿ ಮಾತ್ರ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಧಾರವಾಡ, ಬಳ್ಳಾರಿ, ಶಿವಮೊಗ್ಗ ಕಡೆ ಹೋಗುವಾಗ ಮಾತ್ರ ಮೃಗಾಲಯದ ಹಳೆಯ ಕಾರನ್ನು ಬಳಸುತ್ತಿದ್ದೆ. ಅದು ತುಂಬಾ ಕಡೆ ಕೆಟ್ಟು ನಿಲ್ಲುತ್ತಿತ್ತು. ಮೈಸೂರಿನಲ್ಲಿ ಓಡಾಡುವಾಗ ನನ್ನ ಸ್ವಂತ ಕಾರನ್ನೇ ಬಳಸುತ್ತೇನೆ. ನನಗೆ ಐಶಾರಾಮಿ ಕಾರಿನಲ್ಲಿ ತಿರುಗಾಡಬೇಕೆಂಬ ಆಸೆ ಇಲ್ಲ ಎಂದಿದ್ದಾರೆ.