ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಇಂದು ಮೈಸೂರು ಒಡೆಯರ್ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಅರಮನೆಯಲ್ಲಿರುವ ನಿವಾಸದಲ್ಲಿ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲ ತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನಿಸಿ, ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್ ಹಸ್ತಾಂತರಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುರಕ್ಷತೆ ಕಡೆಗೂ ಗಮನವಿರಲಿ: ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆ ಕಡೆಗೂ ಗಮನವಿರಲಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. ಅರಮನೆ ಮಂಡಳಿ ಕಚೇರಿಯಲ್ಲಿ ಇಂದು ನಡೆದ ದಸರಾ ಕಾರ್ಯಕ್ರಮಗಳ ಪೂರ್ವ ಪರಿಶೀಲನೆ ಹಾಗೂ ವಿಪತ್ತು ಪರಿಸ್ಥಿತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಚತೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು. ಎಲ್ಲಿಯೂ ವಿದ್ಯುತ್ ಅವಘಡ ಆಗದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿ ದಾಸ್ತಾನುಗಳಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲಿಸಬೇಕು ಎಂದು ಸೂಚಿಸಿದರು.
ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಕೆಲಸ ಚುರುಕುಗೊಳ್ಳಬೇಕು. ವಿವಿಧ ಉಪಸಮಿತಿಗಳು ತಮ್ಮ ಕಾರ್ಯಕ್ರಮ ಆಯೋಜನೆ ಮಾಡುವ ಮನ್ನ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳುವುದು, ಮುಖ್ಯ ರಸ್ತೆ ಚರಂಡಿಗಳನ್ನು ಕೂಡಲೇ ದುರಸ್ತಿಪಡಿಸಿ, ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅವರುಗಳ ಸುರಕ್ಷತೆಗೂ ಹೆಚ್ಚಿನ ಗಮನಹರಿಸಬೇಕೆಂದರು.
ದಸರಾ ದೀಪಾಲಂಕಾರ ಆಕರ್ಷಕವಾಗಿರುವುದರೊಂದಿಗೆ ರಸ್ತೆಗಳ ಸೌಂದರೀಕರಣಕ್ಕೂ ಒತ್ತು ನೀಡಿ, ಕುಸ್ತಿಪಟುಗಳಿಗೆ ಉತ್ತಮ ಗೌರವ ಧನ ನೀಡಿ, ಚಲನ ಚಿತ್ರೋತ್ಸವವನ್ನು ಹೆಚ್ಚು ಜನ ವೀಕ್ಷಿಸುವಂತೆ ಆಯೋಜನೆ ಮಾಡಬೇಕು. ಆಹಾರ ಮೇಳದಲ್ಲಿ ಎಲ್ಲಾ ಭಾಗದ ಆಹಾರ ಮಳಿಗೆಗಳು ಇರುವಂತೆ ನೋಡಿಕೊಳ್ಳಬೇಕು ಎಂದರು.
ದಸರಾ ಉತ್ಸವಕ್ಕೆ 1 ಕೋಟಿ ರೂ ನೀಡಿ ಪ್ಲಾಟಿನಂ ಪ್ರಾಯೋಜಕರಾಗಲು ಒಪ್ಪಿರುವ ಸೈಕಲ್ ಬ್ರ್ಯಾಂಡ್ ಅಗರಬತ್ತಿ ಕಂಪನಿ ಹಾಗೂ ಸಿಲ್ವರ್ ಪ್ರಾಯೋಜಕತ್ವ ನೀಡಿಲಿರುವ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಧನ್ಯವಾದ ಹೇಳಲಾಯಿತು.
ಸಭೆಯಲ್ಲಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್,ಜಿ.ಪಂ.ಸಿಇಒ ಗಾಯತ್ರಿ ಕೆ.ಎಂ. ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಇದ್ದರು.
ಅ.15ರಿಂದ 24ರ ವರೆಗೆ ಅರಮನೆ ಸುತ್ತ ರಾತ್ರಿ ಸಂಚಾರ ನಿಷೇಧ: ಅ.15 ರಿಂದ 24 ರ ವರೆಗೆ ಪ್ರತಿದಿನ ಸಂಜೆ 4 ರಿಂದ ರಾತ್ರಿ 11ರ ವರೆಗೆ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವೊಂದು ರಸ್ತೆಯಲ್ಲಿ ಏಕಮುಖ ಸಂಚಾರ, ವಾಹನ ವ್ಯವಸ್ಥೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ಗಣ್ಯರು ಮತ್ತು ಅತಿಥಿ ಗಣ್ಯರ ವಾಹನಗಳ ಸಂಚಾರವನ್ನು ಹೊರತುಪಡಿಸಿದಂತೆ ಇತರ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂಓದಿ: ಅ.15ಕ್ಕೆ ದಸರಾ ಮಹೋತ್ಸವ ಉದ್ಘಾಟನೆ: ಏಕಮುಖ ಸಂಚಾರ, ನಿರ್ಬಂಧಿಸಿರುವ ರಸ್ತೆಗಳ ಮಾಹಿತಿ ಇಂತಿದೆ