ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಕಿತ್ತಳೆ ಬಣ್ಣಕ್ಕೆ ತಿರುಗಲು ಕೇವಲ ಇನ್ನು ಒಂದೇ ಒಂದು ದಿನ ಬಾಕಿ ಇದ್ದು ಮೈಸೂರು ಜಿಲ್ಲೆಯ ಜನತೆಯಲ್ಲಿ ಮನೆ ಮಾಡಿದ್ದ ಕೋವಿಡ್-19 ಆತಂಕ ಮೆಲ್ಲನೆ ದೂರ ಸರಿಯುತ್ತಿದೆ.
ಮೈಸೂರಿನಲ್ಲಿ ಒಟ್ಟು 90 ಕೋವಿಡ್-19 ಸೋಂಕಿತರ ಪೈಕಿ ಈವರೆಗೆ 86 ಮಂದಿ ಡಿಸ್ಚಾಜ್೯ ಆಗಿದ್ದು 4 ಮಂದಿ ಮಾತ್ರ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏ. 30ರಿಂದ ಮೇ 12ರವೆಗೆ ಕೋವಿಡ್-19 ಯಾರಿಗೆ ಸೋಂಕು ದೃಢಪಟ್ಟಿಲ್ಲ. 13 ದಿನದಿಂದ ಕೊರೊನಾ ಸೋಂಕು ದೃಢಪಡದೇ ಇರುವುದರಿಂದ ಬುಧವಾರಕ್ಕೆ 14 ದಿನ ಭರ್ತಿ ಆಗಲಿದೆ.
ರೆಡ್ ಝೋನ್ ವಲಯದಲ್ಲಿ 14 ದಿವಸ ಯಾವುದೇ ಕೊರೊನಾ ಸೋಂಕು ಪತ್ತೆಯಾಗದಿದ್ದಲ್ಲಿ ಕೇಂದ್ರ ಸರ್ಕಾರ ಆಗ ಆರೆಂಜ್ ಝೋನ್ ಆಗಿ ಘೋಷಣೆ ಮಾಡಲಿದೆ. ನಂತರ ಮತ್ತೆ 14 ದಿನದಲ್ಲಿ ಯಾವುದೇ ಸೋಂಕು ಕಾಣಿಸಿಕೊಳ್ಳದಿದ್ದಾಗ ಆಗ ಮತ್ತೆ ಗ್ರೀನ್ ಝೋನ್ ವಲಯವಾಗಿ ಸಾಂಸ್ಕೃತಿಕ ನಗರಿ ಪರಿವರ್ತನೆಯಾಗಲಿದೆ.
ಪ್ರಾರಂಭದಲ್ಲಿ ನಂಜನಗೂಡಿನ ಜುಬಿಲಂಟ್ ಹಾಗೂ ತಬ್ಲಿಘಿ ಜಮಾತ್ ಪ್ರಕರಣಗಳಿಂದ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಮೈಸೂರಿನಲ್ಲಿ ಇಲ್ಲಿಯವರೆಗೆ 90 ಪ್ರಕರಣ ದಾಖಲಾಗಿದ್ದವು. ಜುಬಿಲಂಟ್ ಮೊದಲ ಕೊರೊನಾ ಸೋಂಕಿತ (ರೋಗಿ ಸಂಖ್ಯೆ 52) ನಿಂದ ಅನೇಕರು ಹಾಗೂ ಸಂಪರ್ಕದಲ್ಲಿದ್ದರಿಂದ 84 ಪ್ರಕರಣಕ್ಕೇರಿತ್ತು. ಒಟ್ಟಾರೆ 90 ಪ್ರಕರಣಗಳ ಪೈಕಿ ಮೈಸೂರು ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವಲ್ಲಿ ಜುಬಿಲಂಟ್ ಪ್ರಕರಣವೇ ಸಿಂಹಪಾಲು ಎಂದು ಹೇಳಲಾಗುತ್ತಿದೆ.
ಕೋವಿಡ್-19 ಪ್ರಕರಣ ಪತ್ತೆಯಾದಾಗ ರೋಗಿ ಸಂಖ್ಯೆ 52 ಹಾಗೂ ಸರಿ ಪ್ರಕರಣ ರೋಗಿ ಸಂಖ್ಯೆ 273 (72 ವರ್ಷದ ವೃದ್ಧ) ಇವರಿಬ್ಬರ ಸ್ಥಿತಿ ತುಂಬಾ ಕಠಿಣವಾಗಿತ್ತು. ಆದರೆ, ಕೋವಿಡ್-19 ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯಿಂದ ಇಬ್ಬರ ಜೀವ ಉಳಿದಿದೆ.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಡಾ.ಎ.ಎನ್. ಪ್ರಕಾಶಗೌಡ, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಅವರ ಪರಿಶ್ರಮವೀಗ ಸಾಂಸ್ಕೃತಿಕ ನಗರಿ ಕಿತ್ತಳೆ ಬಣ್ಣಕ್ಕೆ ತಿರುಗಲು ತುದಿಗಾಲ ಮೇಲೆ ನಿಂತಿದೆ.