ಮೈಸೂರು: ಮನೆಯಲ್ಲಿ ಒಬ್ಬಂಟಿಯಾಗಿದ್ದ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ನಿವೇದಿತ ನಗರದಲ್ಲಿ ನಡೆದಿದೆ.
ಪರಶಿವಮೂರ್ತಿ (67) ಹತ್ಯೆಯಾದ ನಿವೃತ್ತ ಪ್ರಾಂಶುಪಾಲ. ಇವರು ಮೈಸೂರಿನ ನಿವೇದಿತಾ ನಗರದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಇವರ ಹೆಂಡತಿ ಪ್ರತೇಕವಾಗಿದ್ದು, ಕುವೆಂಪು ನಗರದಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಇವರಿಗೆ ಮಕ್ಕಳಿಲ್ಲದ ಕಾರಣ 8 ವರ್ಷದ ಬಾಲಕನನ್ನು ದತ್ತು ಪಡೆದು ಸಾಕುತ್ತಿದ್ದರು. ಆ ಬಾಲಕ ಕೂಡ ಹೆಂಡತಿ ಜೊತೆ ವಾಸವಿದ್ದ. ಕೊಲೆಯಾದ ಪರಶಿವಮೂರ್ತಿ ಕುವೆಂಪು ನಗರ ಪಿಯು ಕಾಲೇಜು, ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆ ಸರ್ಕಾರಿ ಪಿಯು ಕಾಲೇಜು ಹಾಗೂ ಹಾಸನ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಪರಶಿವಮೂರ್ತಿ ಬಡ್ಡಿ ವ್ಯವಹಾರ ಮಾಡಿಕೊಂಡು ನಿವೇದಿತಾ ನಗರದಲ್ಲಿ ಇದ್ದರಂತೆ. ನಿನ್ನೆ ಸಂಜೆ ಇವರ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಇವರ ಜೊತೆ ಮಾತಕತೆ ನಡೆಸಿ, ನಂತರ ಇವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಪರಶಿವಮೂರ್ತಿ ಜೋರಾಗಿ ಕಿರುಚಿಕೊಂಡ ಕಾರಣ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಪಕ್ಕದ ನಿವಾಸಿಗಳು ಬಂದು ನೋಡಿದಾಗ ರಕ್ತಸ್ರಾವದಿಂದ ಅವರು ಸ್ಥಳದಲ್ಲಯೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಪ್ರಕಾಶ್ ಗೌಡ ಹಾಗೂ ಸರಸ್ವತಿಪುರಂ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.