ಮೈಸೂರು: ನಂಜನಗೂಡು ಜುಬಿಲೆಂಟ್ಸ್ ಕಾರ್ಖಾನೆಯ ಪ್ರೈಮರಿ ಸಂಪರ್ಕ ಹೊಂದಿದ 223 ಜನರ ಸ್ಯಾಂಪಲ್ ಪರೀಕ್ಷೆ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಮನೆಮನೆಗೆ ಪಡಿತರ ವಿತರಣೆ ವಾಹನಗಳ ಚಾಲನೆ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಂಕಿತರ ಸಂಪರ್ಕ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ನಂಜನಗೂಡಿನ 19 ಕೇಸ್ ಪ್ರೈಮರಿ ಸಂಪರ್ಕದ ಹುಡುಕಾಟವು ಮುಂದುವರೆದಿದೆ. ಎಲ್ಲ ಸ್ಯಾಂಪಲ್ ಪರೀಕ್ಷೆಗೆ 12 ದಿನ ಕಳೆಯಬೇಕು. ಇಲ್ಲವಾದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ. ಈ ಪ್ರಕರಣದ ಇನ್ನು ನೂರಾರು ಸ್ಯಾಂಪಲ್ ಪರೀಕ್ಷೆ ಮಾಡಬೇಕಿದೆ. ಎಲ್ಲರ ವರದಿ ಬಂದ ನಂತರ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಹೊರಗೆ ಇರೋದು ಅಥವ ಕ್ವಾರೆಂಟೈನ್ ಆದವರು ಉದ್ದೇಶಪೂರ್ವಕವಾಗಿ ಹೊರಗಿಲ್ಲ. ಅವರೆಲ್ಲ ಬದುಕಬೇಕು ಅಂತಾನೆ ಕ್ವಾರಂಟೈನ್ ಆಗುತ್ತಿದ್ದಾರೆ. ಜನರು ವಿರೋಧ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು. ನಾವೇನು ಪಿಕ್ನಿಕ್ಗೆ ಹೊರಗೆ ಓಡಾಡ್ತಿಲ್ಲ. ನಿಮ್ಮ ಪ್ರಾಣ ಉಳಿಸಲು ಹೊರಗೆ ಹೋರಾಡುತ್ತಿದ್ದೇವೆ.ಅದನ್ನ ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಲಾಡ್ಜ್‌ಗಳಲ್ಲಿ ಕ್ವಾರಂಟೈನ್ ಮಾಡಲು ವಿರೋಧ ಮಾಡಿದ್ದಕ್ಕೆ ಗರಂ ಆದರು.
ಅಲ್ಲದೇ ನಾಳೆ ನಂಜನಗೂಡಿನಲ್ಲಿ ನಡೆಯಬೇಕಿದ್ದ ಪಂಚಮಹಾರಥೋತ್ಸವ ನಡೆಯೋಲ್ಲ ಎಂದು ತಿಳಿಸಿದ ಅವರು, ದೇವಾಲಯದ ಒಳಗೆ ಮಾತ್ರ ಪೂಜೆ ನಡೆಯಲಿದ್ದು. ರಥ ಎಳೆಯುವುದು ಅಥವ ರಥಕ್ಕೆ ಉತ್ಸವ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಎಲ್ಲರು ಮನೆಯಿಂದಲೇ ದೇವರನ್ನ ಪ್ರಾರ್ಥಿಸಿ. ಯಾರು ದೇವಾಲಯದ ಬಳಿ ಬಾರದಿರಿ ಎಂದು ಮನವಿ ಮಾಡಿದರು.