ಮೈಸೂರು: ಕೋವಿಡ್ -19ನಿಂದಾಗಿ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿನ ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಟಲ್ ಜೀ ಜನಸ್ನೇಹಿ ಕೇಂದ್ರ, ಸ್ಪಂದನ ಕೇಂದ್ರ, ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳು, ಪ್ರಾದೇಶಿಕ ಸಾರಿಗೆ ಇಲಾಖೆಯ ಹೊಸ ವಾಹನ ಚಾಲನಾ ರಹದಾರಿ ಕಲಿಯುವವರಿಗೆ ( ವಾಹನ ಚಾಲನ ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ನಿರ್ಬಂಧ ಅನ್ವಯಿಸುವುದಿಲ್ಲ) ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇವೆಗಳನ್ನು ಸಾರ್ವಜನಿಕರಿಗೆ ಬಂದ್ ಮಾಡಲಾಗಿದೆ. ಆದರೆ ಸರ್ಕಾರಿ ಕೆಲಸಗಳನ್ನು ಕಚೇರಿಗಳಲ್ಲಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಉಪ ನೋಂದಣಾಧಿಕಾರಿ ಕಚೇರಿಯ ಸ್ಥಿರ ಆಸ್ತಿ ನೋಂದಣಿ ಸೇವೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳು(ಖಾತೆ, ಸಾರ್ವಜನಿಕ ಹರಾಜುಗಳು, ಗ್ರಾಮಸಭೆ, ಇತರೆ ಲೈಸನ್ಸ್ ನೀಡುವಿಕೆ, ಜನನ-ಮರಣ ಪ್ರಮಾಣಪತ್ರ ವಿತರಿಸುವ ಸೇವೆಗಳನ್ನು ಹೊರತುಪಡಿಸಿ ) ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇವೆಗಳನ್ನು ರದ್ದು ಮಾಡಲಾಗಿದೆ. ರೈತರಿಗೆ ತೀರಾ ಅಗತ್ಯ ಇದ್ದಲ್ಲಿ ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮೈಸೂರು ಜಿಲ್ಲೆಯ ಕೈಗಾರಿಕೆಗಳಿಗೆ ಸೂಚನೆ ನೀಡಲಾಗಿದೆ. ನೌಕರರ ಬಗ್ಗೆ ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗೆ ಮಾಸ್ಕ್ ತಯಾರಿಸಿಕೊಡಲು ಸೂಚನೆ ನೀಡಲಾಗುವುದು ಎಂದರು.
ಅಲ್ಲದೇ ರಾತ್ರಿ ವೇಳೆ ಬಾರ್ಗಳಿಗೆ ಗ್ರಾಹಕರು ಹೋಗುತ್ತಿದ್ದು, ಇದರ ಬಗ್ಗೆ ಅಬಕಾರಿ ಸಚಿವರಿಗೆ ಪತ್ರ ಬರೆದು ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಬಗ್ಗೆ ಮೈಸೂರಿನ ಜನತೆ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಹೇಳಿದರು.
ಡಿಸಿ ಬೇಸರ: ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜನರು ಮಾತ್ರ ಎಚ್ಚರಿಕೆ ವಹಿಸುತ್ತಿಲ್ಲ. ಇನ್ಯಾವ ರೀತಿ ಜಾಗೃತಿ ಮೂಡಿಸಬೇಕು ಎಂದು ಬೇಸರ ಹೊರಹಾಕಿದರು.