ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಸಿಡಿಮದ್ದು ತಾಲೀಮು ವೇಳೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಗಾಯಗೊಂಡ ಸಿಬ್ಬಂದಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಸಂಜೆ ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಸಂಬಂಧ ತಾಲೀಮು ನಡೆಸಲಾಗುತ್ತಿತ್ತು. ಈ ವೇಳೆ ಸಿಬ್ಬಂದಿಗಳು ಸಿಡಿಮದ್ದು ಸಿಡಿಸಿ ರಿಹರ್ಸಲ್ ನಡೆಸುತ್ತಿದ್ದರು. ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತಿತ್ತು. ಈ ವೇಳೆ ಸಿಡಿಮದ್ದು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಸಿಬ್ಬಂದಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಗಜಪಡೆಗಳಿಂದ ಅಂತಿಮ ಸುತ್ತಿನ ತಾಲೀಮು ಯಶಸ್ವಿ : ಜಂಬೂಸವಾರಿಯಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿದ್ದ ಗಜಪಡೆಗಳಿಗೆ ಕಳೆದ ಎರಡು ತಿಂಗಳುಗಳಿಂದ ವಿವಿಧ ತಾಲೀಮು ನಡೆಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳು ಭಾನುವಾರ ಅಂತಿಮ ಹಂತದ ತಾಲೀಮನ್ನು ಯಶಸ್ವಿಯಾಗಿ ನಡೆಸಿತು. ಕುಶಾಲತೋಪು ಸಿಡಿಸುವ ಮೂಲಕ ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು ನಡೆಸಲಾಯಿತು.
ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಸುತ್ತಲೂ ಸಾರ್ವಜನಿಕರ ಪ್ರವೇಶ ತಡೆಯಲು ವಿಶೇಷ ಪೊಲೀಸ್ ತುಕಡಿ ನಿಯೋಜಿಸಲಾಗುತ್ತಿದೆ. ಇದಲ್ಲದೇ, ಅರಮನೆಯಲ್ಲಿ ಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆಗಳ ತುಕಡಿಗಳನ್ನು ನೇಮಿಸಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು, ಅಶ್ವಪಡೆ, ಶಸ್ತ್ರಸಜ್ಜಿತ ಪೊಲೀಸ್ ತುಕಡಿಗಳು ಕೂಡ ಅಂತಿಮ ಸುತ್ತಿನ ಪೂರ್ವಾಭ್ಯಾಸ ನಡೆಸಿದವು.
ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ನಾಳೆ ನಡೆಯಲಿದೆ. ಈ ಸಂಬಂಧ ಕ್ಯಾಪ್ಟನ್ ಅಭಿಮನ್ಯು ಮರದ ಅಂಬಾರಿ ಹೊರುವ ಮೂಲಕ ಭಾನುವಾರ ಅಂತಿಮ ತಾಲೀಮು ಮುಗಿಸಿದೆ. ಭಾನುವಾರ ಸಂಜೆ ಅಭಿಮನ್ಯು ನೇತೃತ್ವದಲ್ಲಿ ಅರಮನೆ ಆವರಣದಿಂದ ಹೊರಟ ಅರ್ಜುನ, ಭೀಮ, ರೋಹಿತ್, ಕಂಜನ್, ಗೋಪಿ, ಹಿರಣ್ಯ, ಲಕ್ಷ್ಮಿ, ವರಲಕ್ಷ್ಮಿ, ಮಹೇಂದ್ರ, ಸುಗ್ರೀವಾ, ಧನಂಜಯ, ಪ್ರಶಾಂತ ಆನೆಗಳು ಬನ್ನಿಮಂಟಪದವರೆಗೆ ಸಾಗಿ ತಾಲೀಮು ನಡೆಸಿದವು.
ಮೈಸೂರು ದಸರಾ ಹಿನ್ನಲೆ ನಗರಾದ್ಯಂತ ಸಂಭ್ರಮ ಮನೆ ಮಾಡಿದೆ. ಮೈಸೂರು ನಗರ ಮದುಮಗಳಂತೆ ಸಿಂಗಾರಗೊಂಡಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಅಭಿಮನ್ಯು ನೇತೃತ್ವದ ಜಂಬೂ ಸವಾರಿಯನ್ನು ಕಂಡು ಜನರು ಮೂಕವಿಸ್ಮಿತರಾಗುತ್ತಾರೆ. ನಾಳೆ ಜಂಬೂ ಸವಾರಿಗೆ ಪುಷ್ಪಾರ್ಷನೆ ಮಾಡುವ ಮೂಲಕ ಚಾಲನೆ ನೀಡಲಿದ್ದು, ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಅರಮನೆ ಆವರಣದಲ್ಲಿ ಜಂಬೂ ಸವಾರಿ ಅಂತಿಮ ರಿಹರ್ಸಲ್ ಯಶಸ್ವಿ: ಇಂದಿನಿಂದ ಮೂರು ದಿನಗಳ ಕಾಲ ಸಿಎಂ ಮೈಸೂರು ಪ್ರವಾಸ