ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಅದರ ಜೊತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಚಿತ್ರರಂಗದ ಕಲಾವಿದರನ್ನು ಪ್ರೋತ್ಸಾಯಿಸಬೇಕಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದರು.
ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹಳ ಸಂತೋಷದಿಂದ ಕಾರ್ಯಕ್ರಮ ಉದ್ಘಾಟಿಸಿದ್ದೇನೆ. 400 ವರ್ಷಗಳ ಇತಿಹಾಸ ಇರುವ ದಸರಾ ಮಹೋತ್ಸವದಲ್ಲಿ ಇಂತಹ ಕಾರ್ಯಕ್ರಮ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಬೆಳೆಸಲು ನೆರವಾಗುತ್ತದೆ ಎಂದರು.
ಬಳಿಕ ಮಾತನಾಡಿದ ನಟ ಜಗ್ಗೇಶ್, ದಸರಾ ಮಹೋತ್ಸವ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಕೃಷ್ಣದೇವರಾಯರ ನಂತರ ಇಲ್ಲಿನ ಯದುಕುಲ ಆಚರಿಸುತ್ತ ಬಂದರೂ ರಾಜರ ಕೊಡುಗೆಯನ್ನ ನಾವು ಸದಾಕಾಲವೂ ಸ್ಮರಿಸಬೇಕು. ಹಿಂದೂ ಸಂಪ್ರದಾಯದಲ್ಲಿ ಹಬ್ಬ ಆಚರಿಸೋದು, ಬೇರೆ ಬೇರೆ ಕಡೆಗಳಲ್ಲಿ ಇರುವವರೆಲ್ಲರೂ ಒಂದೆಡೆ ಸೇರಬೇಂಕೆಂದು. ಈ ನಾಡ ಹಬ್ಬ ಇಡೀ ವಿಶ್ವದಲ್ಲಿರುವ ಎಲ್ಲ ಕನ್ನಡಿಗರನ್ನು ಸೇರಿಸುತ್ತೆ. ರಾಜರ ಕಾಲದಲ್ಲೂ ಕಲಾವಿದರನ್ನ ಗೌರವಿಸಲಾಗುತ್ತಿತ್ತು. ಆ ಸಂಪ್ರದಾಯ ಇಂದಿಗೂ ನಡೆದುಕೊಂಡು ಬರುತ್ತಿದೆ ಎಂದರು.
ಕಲಾವಿದರಲ್ಲಿ ಎ ಗ್ರೇಡ್, ಬಿ ಗ್ರೇಡ್, ಸಿ ಗ್ರೇಡ್ ಅಂತಾ ಇದಾರೆ. ಇದ್ರಲ್ಲಿ ಸಂಕಷ್ಟದಲ್ಲಿರೋದು ಸಿ ಗ್ರೇಡ್ ಕಲಾವಿದರು. ಹಿರಿಯ ಕಲಾವಿದರು, 25 ವರ್ಷಗಳ ಹಿಂದೆ ಸಿನಿಮಾಗಳಲ್ಲಿ ನಟಿಸಿದ್ದ ಬಹಳಷ್ಟು ಜನ ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಬರಬೇಕು. ಸಿಎಂ ಯಡಿಯೂರಪ್ಪ ಅವರು ಸಹ ಕಲಾವಿದರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ಮೈಸೂರು ರಾಜವಂಶಸ್ಥರು ಸಹ ಕಲಾವಿದರನ್ನು ಗೌರವಿಸುತ್ತಿದ್ದರು. ಕನ್ನಡ ಮೊದಲ ಸಿನಿಮಾಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಾಪಕರಾಗಿದ್ದರು ಎಂದು ಜಗ್ಗೇಶ್ ಹೇಳಿದ್ರು.
ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ, ವಿಧಾನ ಪರಿಷತ್ ಸದಸ್ಯರುಗಳಾದ ಸಂದೇಶ್ ನಾಗರಾಜ್, ಕೆ. ಟಿ. ಶ್ರೀಕಂಠೇಗೌಡ, ಮಾಜಿ ಸಚಿವ ಶಿವಣ್ಣ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಟ ಜಗ್ಗೇಶ್, ನಿರ್ದೇಶಕ ನಾಗಣ್ಣ, ನಟಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್, ನಟಿಯರಾದ ಆಶಿಕಾ ರಂಗನಾಥ್, ಸಂಚಿತಾ ಪಡುಕೋಣೆ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.