ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ನಾಲ್ಕನೇ ದಿನದಂದು ವಚನಗಾಯನ ಹಾಗೂ ದಾಸವಾಣಿಗಳು ಮೊಳಗಿದವು.
ಮೊದಲಿಗೆ ರಾಯಚೂರಿನ ಪಂಡಿತ್ ಅಂಬಯ್ಯನುಲಿ ಮತ್ತು ತಂಡದವರು ವಚನಗಾಯನವನ್ನು ಅತ್ಯದ್ಭುತವಾಗಿ ಹಾಡಿದರು.
ಭೂಪ ಭೂಪಾಲಿ ರಾಗದ ದಾದರ ತಾಳದ ಎಲ್ಲಾ ಪುರತರ ಎಂಬ ವಚನಗಾಯನದ ಮೂಲಕ ಪ್ರಾರಂಭಿಸಿದ ಅವರು, ಮಿಯಾ ಮಲ್ಹಾರ್ ರಾಗದ ಭಜನ್ ತಾಳದಲ್ಲಿ ನಾದಪ್ರಿಯ ಶಿವನೆಂಬರು ಹಾಗೂ ಜೋಗ ಮಿಶ್ರಾ ರಾಗದಲ್ಲಿ ಭಕ್ತಿಯೆಂಬ ಗಾಯನವನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು.
ಇದಲ್ಲದೆ ಮಾಲಕೌಂಸ್ ರಾಗದ ಜಪ್ ತಾಳದಲ್ಲಿ ತನುವ ಬೇಡಿದಡೀವೆ, ಜೀವನಪುರಿ ರಾಗದಲ್ಲಿ ಬಡತನಕ್ಕೆ ಹುಂಬುವ ಚಿಂತೆ, ತಿಲಾಂಗ್ ರಾಗದಲ್ಲಿ ಹಾವಿನ ಡೊಂಕು ಹುತ್ತಕ್ಕೆ ಸಸಿನ, ಭೀಮ್ ಪಲಾಸ್ ರಾಗದಲ್ಲಿ ಭಕ್ತಿ ಇಲ್ಲದ ಬಡವ ನಾನಯ್ಯ, ಶಿವರಂಜಿನಿ ರಾಗದಲ್ಲಿ ಕಲ್ಲು ಕಟ್ಟಿಗೆ, ಗೋರಕ್ ಕಲ್ಯಾಣ್ ರಾಗದಲ್ಲಿ ಇವನಾರವ, ಮಾರು ಬಿಹಾಗ್ ರಾಗದಲ್ಲಿ ಶರಣ ನಿದ್ದೆಗೈದರೆ ಗೀತೆಗಳು ಶ್ರೋತೃಗಳನ್ನು ತಲೆದೂಗುವಂತೆ ಮಾಡಿತು.
ಇವರ ತಂಡದಲ್ಲಿ ಕೀಬೋರ್ಡ್‌ನಲ್ಲಿ ಷಣ್ಮುಗ ಸಜ್ಜ, ತಬಲದಲ್ಲಿ ಭೀಮಾಶಂಕರ್, ಕೊಳಲುವಾದನ ನೀತು ನಿನಾದ್, ರಿದಂಪ್ಯಾಡ್‌ನಲ್ಲಿ ರವಿಕುಮಾರ್, ಹಾರ್ಮೋನಿಯಂ ವೆಂಕಟೇಶ್ ಆಲಕೂಡ್, ಸಹಗಾಯನ ಚಿದಾನಂದಮೂರ್ತಿ ಅವರು ಸಾಥ್ ನೀಡಿದರು.
ನಂತರ ಪುತ್ತೂರು ನರಸಿಂಹನಾಯಕ ಮತ್ತು ತಂಡದವರು ಅನೇಕ ವೈಶಿಷ್ಟ್ಯಪೂರ್ಣ ದಾಸವಾಣಿಗಳನ್ನು ಪ್ರೇಕ್ಷಕರಿಗೆ ಉಣಬಡಿಸಿದರು.
ಮೊದಲಿಗೆ ವಿಜಯದಾಸರ ರಚನೆಯ ಉಮಾ ಕಾತ್ಯಾಯಿನಿ ಗೌರಿ, ನಂತರ ಗೋಪಾಲಕೃಷ್ಣ ವಿಠ್ಠಲ ಅವರ ಹಾಲಾಹಲ ಉಂಡ ಎಂಬ ಅರ್ಥಪೂರ್ಣವಾದ ದಾಸವಾಣಿಗಳನ್ನು ಹಾಡಿದರು.
ಪುರಂದರದಾಸರು ರಚನೆಯ ದೇವರು ಕೊಟ್ಟಾನು, ಕಾಗದಬಂದಿದೆ ಹಾಗೂ ಕನಕದಾಸರ ಅಂಗಳದೊಳು ರಾಮನಾಡಿದ, ದಾಸನಾಗು ವಿಶೇಷನಾಗು, ಎಂಥಾ ಠವಳಿಗಾರನಮ್ಮ ಮತ್ತು ಜಗನ್ನಾಥದಾಸರ ರಚನೆಯ ರಮಾಮನೋಹರನೆ ಹಾಗೂ ವಿಜಯದಾಸರ ಮನವೇ ಮಾಧವನೊಳು ಎಂಬ ದಾಸವಾಣಿಗಳು ಕೇಳುಗರ ಮೆಚ್ಚುಗೆ ಗಳಿಸಿದವು.
ಕೀಬೋರ್ಡ್‌ನಲ್ಲಿ ಗಣೇಶ್ ಭಟ್, ತಬಲ ರಘನಾಥ್, ಕೊಳಲು ಸಮೀರ್ ರಾವ್, ರಿದಂಪ್ಯಾಡ್‌ನಲ್ಲಿ ಗುರುದತ್ ಅವರು ವಿದ್ವತ್‌ಪೂರ್ಣವಾಗಿ ನುಡಿಸಿದರು.