ಮೈಸೂರು: ಕಳೆದ ಹತ್ತು ದಿನಗಳಲ್ಲಿ ಶತಕದ ಗಡಿ ದಾಟಿರುವ ಸೋಂಕಿತ ಪ್ರಕರಣಗಳನ್ನು ನೋಡಿದರೆ ಮತ್ತೆ ಮೈಸೂರು ಕೊರೊನಾ ಹಾಟ್ ಸ್ಪಾಟ್ ಆಗುವುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಪ್ರಾರಂಭದಲ್ಲಿ ಬೆಂಗಳೂರು ನಂತರ ಕೊರೊನಾ ಹಾಟ್ ಸ್ಪಾಟ್ ಎಂದು ರೆಡ್ ಝೋನ್ನಲ್ಲಿದ್ದ ಮೈಸೂರು, ನಂತರ ಕೊರೊನಾ ಮುಕ್ತವಾಗಿ ಹೊರಹೊಮ್ಮಿತ್ತು. ಆದರೆ ಕಳೆದ 10 ದಿನಗಳಲ್ಲಿ 2 ನೇ ಹಂತದಲ್ಲಿ ಮೈಸೂರು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು , ಈಗ ಜಿಲ್ಲೆಯ ಜನರ ಆತಂಕಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಮಾರ್ಚ್ 26 ರಂದು ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ನೌಕರ ಪಿ-52 ನಿಂದ 81 ಜನರಿಗೆ ಸೋಂಕು ಹರಡಿದ್ದು , ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಯಿತು. ನಂತರ ಜಿಲ್ಲಾಡಳಿತ ತಕ್ಷಣ ಸಮುದಾಯಕ್ಕೆ ಸೋಂಕು ಹರಡದಂತೆ ಬಿಗಿಯಾದ ಕ್ರಮ ಕೈಗೊಂಡಿದ್ದು , 40 ದಿನಗಳಲ್ಲಿ ಮೈಸೂರು ಕೊರೊನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದ್ದು, ನಂತರ ಲಾಕ್ಡೌನ್ ಸಡಿಲಿಕೆ ಮಾಡಲಾಯಿತು.
ಕಳೆದ ಮಾರ್ಚ್ ತಿಂಗಳಲ್ಲಿ 12 ಸೋಂಕಿತ ಪ್ರಕರಣಗಳು, ಏಪ್ರಿಲ್ನಲ್ಲಿ 63 ಹಾಗೂ ಜೂನ್ನಲ್ಲಿ ಕೇವಲ 6 ಪ್ರಕರಣಗಳು ಜುಬಿಲಂಟ್ ಕಾರ್ಖಾನೆಯಿಂದ ಬಂದಿದ್ದು , ಜೂನ್ ತಿಂಗಳ 19 ರಿಂದ 10 ದಿನಗಳಲ್ಲಿ 123 ಪಾಸಿಟಿವ್ ಪ್ರಕರಣಗಳು ಬಂದಿದ್ದು , ಪುನಃ ಸಾಂಸ್ಕೃತಿಕ ನಗರಿ ಕೊರೊನಾ ಹಾಟ್ ಸ್ಪಾಟ್ ಆಗುವುದೆ ಎಂಬ ಅನುಮಾನ ಹಾಗೂ ಆತಂಕ ಜನರಲ್ಲಿ ಮನೆ ಮಾಡಿದ್ದು , ಈ ಬಗ್ಗೆ ಯಾರು ಭಯಪಡಬೇಕಾಗಿಲ್ಲ. ಆದರೂ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಗ್ರಾಮಾಂತರಕ್ಕೂ ಹರಡಿದ ಸೋಂಕು:
ಪ್ರಾರಂಭದ ದಿನಗಳಲ್ಲಿ ಮೈಸೂರು ನಗರ ಹಾಗೂ ಜುಬಿಲಿಯೆಂಟ್ ಕಾರ್ಖಾನೆಯಿಂದ ಮಾತ್ರ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು , ಜೂನ್ 8 ರ ಲಾಕ್ ಡೌನ್ ಸಡಿಲಿಕೆಯಾದ ನಂತರ ಮಹಾರಾಷ್ಟ್ರ , ಕೇರಳ, ಆಂದ್ರಪ್ರದೇಶದ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ಪ್ರದೇಶದಿಂದ ಜನರು ಮೈಸೂರಿಗೆ ಆಗಮಿಸಿದ್ದು , ಇದರ ಜೊತೆಗೆ ಬೆಂಗಳೂರಿಗೆ ಕರ್ತವ್ಯ ನಿರ್ವಹಿಸಿಲು ಹೋಗಿದ್ದ ಕೆ.ಎಸ್.ಆರ್.ಪಿ ಪೋಲಿಸರಿಂದಲೂ ಸೋಂಕು ಪತ್ತೆಯಾಗಿದೆ.
ಈಗ ಈ ಸೋಂಕು ಜಿಲ್ಲೆಯ ತಾಲೂಕು ಕೇಂದ್ರಗಳಾದ ನಂಜನಗೂಡು, ತಿ.ನರಸೀಪುರ, ಹೆಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ ಭಾಗದ ಹಳ್ಳಿಗಳಲ್ಲೂ ಸೋಂಕಿತ ಪ್ರಕರಣಗಳು ವರದಿಯಾಗಿದ್ದು , ಇದು ಕೊರೊನಾ ಸ್ಫೋಟದ ಮುನ್ಸೂಚನೆಯಾಗಿದೆ.
ಇದಕ್ಕಾಗಿ ಜಿಲ್ಲಾಡಳಿತ ಕೊರೊನಾ ಸೋಂಕಿತ ಪ್ರಕರಣಗಳು ಕಂಡುಬಂದ ಸುಮಾರು 50 ಪ್ರದೇಶಗಳನ್ನು ಸೀಲ್ ಡೌನ್ ಮಾಡಿದ್ದು , ಸೋಂಕು ಹರಡದಂತೆ ಕ್ರಮ ಕೈಗೊಂಡಿದೆ. ಆದರೆ ಸೋಂಕಿತ ಪ್ರಕರಣಗಳ ಜೊತೆಗೆ ಕೋವಿಡ್ ಆಸ್ಪತ್ರೆಯಿಂದ ಹೆಚ್ಚಿನ ಜನ ಡಿಸ್ಚಾರ್ಜ್ ಆಗುತ್ತಿದ್ದು , ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿತ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 259 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 166 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು , ಕೋವಿಡ್ ಆಸ್ಪತ್ರೆಯಲ್ಲಿ 95 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
2 ನೇ ಹಂತದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಇದಕ್ಕೆ ಜಿಲ್ಲೆಯ ಜನರು ಆತಂಕಗೊಂಡಿದ್ದು ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುವುದೇ ಎಂಬ ಆತಂಕ ಉಂಟಾಗಿದೆ.