ಮೈಸೂರು : ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಕೊಲ್ಲಾಪುರದ ಪೈಲ್ವಾನ್ ತರ ಆಡುತ್ತಿದ್ದ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.
ಇಲ್ಲಿನ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿಯಂತಹ ಒಬ್ಬ ಸಜ್ಜನ ರಾಜಕಾರಣಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ವಿಧಾನಸೌಧದ ಒಳಗೆ ಅಥವಾ ಹೊರಗೆ ಎರಡೂ ಕಡೆಯಲ್ಲಿ ಉತ್ತಮವಾದ ನಡವಳಿಕೆ ಹೊಂದಿದ್ದಾರೆ. ಮೀಸಲಾತಿಗೆ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ನೀಡಿದ್ದಾರೆ. ಅಲ್ಲದೆ ತುಂಬಾ ಶಾಂತವಾದ ಸ್ವಭಾವ ಹೊಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರೆ ಕೊಲ್ಲಾಪುರ ಪೈಲ್ವಾನ್ ತರ ಆಗ್ತಿತ್ತು. ಸೌಜನ್ಯಕ್ಕಾದರೂ ಬೇರೆಯವರಿಗೆ ಗೌರವ ಕೊಡುವುದನ್ನು ಕಲಿಯುತಿದ್ದೀರಾ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಸಂವಿಧಾನ ರಕ್ಷಿಸಿ ಎಂದು ಹೋರಾಟ ಮಾಡುತ್ತಾರೆ. ಸಂವಿಧಾನವನ್ನು ರಕ್ಷಣೆ ಮಾಡುವವರು ನೀವಾ?. ಮಹದೇವಪ್ಪ ಎಂದಾದರೂ ಹೋರಾಟ ಮಾಡಿದ್ದಾರಾ ? ನಮ್ಮ ತರ ಹೋರಾಟ ಮಾಡಿದ್ದೀರಾ ನೀವೆಲ್ಲ ಎಂದು ಪ್ರಶ್ನಿಸಿದರು. ನಮ್ಮ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಗ್ರಂಥ. ಇದು ನಿಮ್ಮ ಗ್ರಂಥ ಅಲ್ಲ. ಅಂಬೇಡ್ಕರ್ ವಿಶ್ವಜ್ಞಾನಿ. ಕಾಂಗ್ರೆಸ್ನವರು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರನ್ನು ನಂಬಬೇಡಿ. ಯೋಚನೆ ಮಾಡಿ ಮತ ಹಾಕಿ. ಕಾಂಗ್ರೆಸ್ನವರು ಕಳ್ಳರು ಎಂದು ವಾಗ್ದಾಳಿ ನಡೆಸಿದರು.
ಯಾರಾದರೂ ಮುಖ್ಯಮಂತ್ರಿಯಾದವರು ಎರಡು ಕರೆ ನಿಲ್ಲುತ್ತಾರಾ?. ನನ್ನ ಕೊನೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನಮಗೆ ಎಷ್ಟು ನೋವು ಕೊಟ್ಟಿದ್ದಾರೆ ಗೊತ್ತಾ?. ಪ್ರಿಯಾಂಕ್ ಖರ್ಗೆಯನ್ನು ತಂದು ಮಂತ್ರಿ ಮಾಡ್ತಿಯಲ್ಲ. ನನ್ನ ಮೇಲೆ ಎಷ್ಟು ಹೊಟ್ಟೆ ಕಿಚ್ಚು ಇತ್ತು ನಿನಗೆ ಎಂದು ಪ್ರಶ್ನಿಸಿದರು. ಇದೇ ಖರ್ಗೆ ,ಶ್ರೀನಿವಾಸ್ ಪ್ರಸಾದ್ ಇಲ್ಲದಿದ್ದರೆ ನೀನೆಲ್ಲಿ ಮುಖ್ಯಮಂತ್ರಿ ಆಗುತ್ತಿದ್ದೆ, ಸೌಜನ್ಯಕ್ಕೆ ಆದರೂ ನನ್ನನ್ನು ಸಚಿವ ಸಂಪುಟದಿಂದ ತೆಗೆಯುತ್ತೇನೆ ಎಂದು ಹೇಳಿದೆಯಾ? ನಾನು ನಿನಗಿಂತ ಹಿರಿಯ ರಾಜಕಾರಣಿ. ನನ್ನ ಒಂದು ಮಾತು ಕೇಳದೆ ಮಂತ್ರಿ ಮಂಡಲದಿಂದ ಕೈಬಿಟ್ಟೆ ಅಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಉಪ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು. ಆದರೆ ನಾನು ಚಾಮುಂಡೇಶ್ವರಿಯಲ್ಲಿ ನಿನ್ನ ಸೋಲಿಸಿದೆ ಎಂದು ಹೇಳಿದ್ರು.
ಮಲ್ಲಿಕಾರ್ಜುನ ಖರ್ಗೆ ಹೋರಾಟಗಾರರಲ್ಲ.. ಅವಕಾಶವಾದಿ: ಮಲ್ಲಿಕಾರ್ಜುನ ಖರ್ಗೆ ಯಾವ ಹೋರಾಟವನ್ನೂ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವಕಾಶವಾದಿ. ಕಾಂಗ್ರೆಸ್ ಮುರಿದು ಹೋಗಿರುವ ಕುರ್ಚಿಯನ್ನು ಖರ್ಗೆಗೆ ಕೊಟ್ಟಿದ್ದಾರೆ. ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಆದರೆ ಓಲೈಕೆ ಮಾಡಿ ಮಂತ್ರಿಯಾದರು. ಆದರೆ ಅವರು ಎಲ್ಲೂ ಕೂಡ ಹೋರಾಟ ಮಾಡಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಕೆ. ಶಿವರಾಮ್ ಪ್ರಚಾರ : ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಕೆ. ಶಿವರಾಂ ವಿ. ಸೋಮಣ್ಣ ಪರ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರಿಂದಲೂ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ಎಂದಾದರೂ ಸಂವಿಧಾನವನ್ನು ಬದಲಿಸುತ್ತೇನೆ ಎಂದು ಹೇಳಿದ್ದಾರಾ? ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಸಿಎಂ ಮಹದೇವಯ್ಯ, ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಭಾಗವಹಿಸಿದ್ದರು.
ಇದನ್ನೂ ಓದಿ :ಚನ್ನಪಟ್ಟಣದಲ್ಲಿ ಜೆಡಿಎಸ್ - ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ: ಮೋದಿ - ದೇವೇಗೌಡರಿಂದ ಬಿರುಸಿನ ಪ್ರಚಾರ