ಮೈಸೂರು: ಡಿಕೆ ಶಿವಕುಮಾರ್ ಒಬ್ಬ ಫೈಟರ್. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವರ ಹೋರಾಟವೇ ಪ್ರಮುಖ ಕಾರಣ ಎಂದು ಸಂಸದ ಪ್ರತಾಪ್ ಸಿಂಹ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೈನ್ ಬಾಕ್ಸ್ ಏಜೆನ್ಸಿ ಮೂಲಕ ಗ್ಯಾರಂಟಿ ಯೋಜನೆ ರೂಪಿಸಿದವರು ಡಿಕೆ ಶಿವಕುಮಾರ್. ಅವರು ನಮ್ಮ ಎದುರಾಳಿ ಇರಬಹುದು. ನಾನು ರಾಜಕೀಯ ಕಾರಣಕ್ಕೆ ಈ ರೀತಿ ಹೇಳುತ್ತಿಲ್ಲ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು ಎಂದರು.
ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನನ್ನು ಎಳಸು ಎಂದದ್ದಕ್ಕೆ ಬೇಜಾರಿಲ್ಲ. ರಾಜಕೀಯ ಪ್ರಬುದ್ಧತೆ ಇರುವ ನೀವು ನಾನು ಕೇಳಿದ ಪ್ರಶ್ನೆಗಳಿಗೆ ಏಕೆ ಉತ್ತರ ನೀಡುತ್ತಿಲ್ಲ ಅನ್ನೋದು ಬೇಜಾರಾಗುತ್ತಿದೆ. ನೀವು ಬುದ್ಧಿವಂತರು, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ? ನನ್ನನ್ನ ಚೈಲ್ಡ್ ಅಂತಾನೆ ಕರಿಯಿರಿ, ನನಗೇನು ಬೇಜಾರಿಲ್ಲ. ಆದರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಹೇಗೆ ಅನ್ನೋದು ತಿಳಿಸಿ ಎಂದು ಪ್ರಶ್ನಿಸಿದರು.
ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ: ಸೀನಿಯರ್ ರಾಜಕಾರಣಿ ಆಗಿರುವ ನೀವು ಜಿ ಪರಮೇಶ್ವರ್ ಅವರನ್ನು ಮುಗಿಸಿ ಮುಖ್ಯಮಂತ್ರಿ ಆಗಿದ್ರಲ್ಲ ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಸರ್ ಎಂದು ನಯವಾಗಿಯೆ ಕಾಲೆಳೆದ ಸಿಂಹ, ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್ ಡಿ ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ, ಅದು ನನಗೆ ಬೇಡ. ಚುನಾವಣೆ ವೇಳೆ ನಿಮಗೆ ಯಾರು ಸಹಾಯ ಮಾಡಿದರು, ಯಾರ್ಯಾರಿಗೆ ಕರೆ ಮಾಡಿದ್ದೀರಿ, ವರುಣಾ ಕ್ಷೇತ್ರಕ್ಕೆ ಚಿತ್ರ ನಟ ಸುದೀಪ್ ಬರದಂತೆ ಹೇಗೆ ತಡೆದಿರಿ, ನಿಮ್ಮ ಬಗ್ಗೆ ಯಾರು ತೀಕ್ಷ್ಣವಾಗಿ ಹೇಳಿಕೆ ನೀಡದಂತೆ ಹೇಗೆ ನಿರ್ವಹಣೆ ಮಾಡಿದಿರಿ ಅನ್ನೋದೆಲ್ಲ ನಿಮ್ಮ ಆತ್ಮಸಾಕ್ಷಿಗೆ ಗೊತ್ತಿದೆ. ನೀವು ನಿಮ್ಮ ಕೈ ಹಿಡಿದವರನ್ನು ಯಾರೂ ಸ್ಮರಣೆ ಮಾಡಿಕೊಂಡಿಲ್ಲ. ಈಗ ಮುಖ್ಯಮಂತ್ರಿಯಾಗಿದ್ದೀರಿ, ಎರಡ್ಮೂರು ವರ್ಷ ಅಧಿಕಾರದಲ್ಲಿರುತ್ತೀರಿ, ಈಗಲಾದರೂ ಸ್ಮರಿಸಿ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಡಿಕೆ ಶಿವಕುಮಾರ್ ಅವರ ವಿರುದ್ಧವೇ ಇದೀಗ ಎಂಬಿ ಪಾಟೀಲ್ ಅವರನ್ನು ಚೂ ಬಿಟ್ಟಿದ್ದೀರಿ. ಇದನ್ನೆಲ್ಲಾ ಪ್ರಬುದ್ಧತೆ ಎನ್ನುವುದಾದ್ರೆ ಇದ್ಯಾವುದೂ ನಮಗೆ ಬೇಡ ಸರ್ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯನವರನ್ನು ಕುಟುಕಿದರು.
ಈ ಹಿಂದೆ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸರಣಿ ಹಲ್ಲೆಗಳಾಗಿದೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಬಂಡೆ ಕೊಲೆ ಆಯ್ತು, ಡಿಸಿಪಿಯಾಗಿದ್ದ ಗಣಪತಿ, ಮೈಸೂರಿನಲ್ಲಿ ಅಧಿಕಾರಿ ರಶ್ಮಿ ಮಹೇಶ್ ಮೇಲೆ ದಾಳಿ, ಶಿಖಾ ಹಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಗಲಾಟೆಗಳಾಗಿದ್ದವು. ಹೀಗಾಗಿ ಈ ಸರ್ಕಾರದಿಂದ ನಾವು ಕಾನೂನು ವ್ಯವಸ್ಥೆ ಕಾಣುವುದು ಸಾಧ್ಯವಿಲ್ಲ. ಇದಷ್ಟೇ ಅಲ್ಲದೇ ರಾಜ್ಯದ ಜನ ಮುಂದೆ ಇನ್ನಷ್ಟು ನೋಡುವುದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಂಹ ವಾಗ್ದಾಳಿ ನಡೆಸಿದರು.
ಒಂದು ತಿಂಗಳು ಮೋದಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ: ಒಂದು ತಿಂಗಳ ಕಾಲ ಪ್ರಧಾನಿ ಮೋದಿ ಕೊಟ್ಟಿರುವ 9 ವರ್ಷಗಳ ಯೋಜನೆಯ ಜಾಗೃತಿ ಮೂಡಿಸುತ್ತೇವೆ. ಜೂನ್ 22ರಂದು ಕಾರ್ಯಕರ್ತರ ಸಭೆ ನಡೆಯಲಿದೆ. ರಾಜ್ಯದ ಪ್ರಮುಖ ನಾಯಕರು ಬರಲಿದ್ದಾರೆ. ಮೈಸೂರು ಭಾಗಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ನೇಮಕ ಮಾಡಿದ್ದಾರೆ. ಮೈಸೂರಿಗೆ ಮೋದಿಜಿ ರೈಲ್ವೆ, ವಿಮಾನ, ರಸ್ತೆ ನಿರ್ಮಾಣ ಕಾರ್ಯದ ಕೊಡುಗೆ ನೀಡಿದ್ದಾರೆ. ಹತ್ತು ಸಾವಿರ ಕೋಟಿ ನೀಡಿ ಮೈಸೂರು - ಬೆಂಗಳೂರು ದಶಪಥ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಗೂ ಒಂದು ಸಾವಿರ ಕೋಟಿ ನೀಡಿದ್ದಾರೆ.
ಮೈಸೂರು - ಕುಶಾಲನಗರ ರಸ್ತೆ ನಿರ್ಮಾಣ ಮಾಡ್ತೇವೆ. ರಿಂಗ್ ರಸ್ತೆಯಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದು ರಿಂಗ್ ರಸ್ತೆಗೆ ಅನುದಾನ ಸ್ಥಗಿತಗೊಳಿಸಿದೆ. ಇದು ಮೈಸೂರಿನ ರಿಂಗ್ ರಸ್ತೆಗೆ ಕಾಂಗ್ರೆಸ್ ಕೊಡುಗೆಯಾಗಿದೆ. ಕಾಂಗ್ರೆಸ್ ಸರ್ಕಾರ ಮತ್ತೆ ಕತ್ತಲಿನ ರಸ್ತೆ ಮಾಡಿದ್ದಾರೆ. ಜಲಜೀವನ್ ಯೋಜನೆ ಮೂಲಕ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ. ಅಮೃತ್ -2 ನಲ್ಲಿಯೂ ಮೈಸೂರು ನಗರದ ವಿವಿಧ ಕಡೆಗಳಿಗೆ ನೀರು ತರುತ್ತಿದ್ದೇವೆ. ಇಷ್ಟೆಲ್ಲಾ ಕೊಡುಗೆಗಳನ್ನು ಮೋದಿಜಿ ಮೈಸೂರಿಗೆ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದ ಜನ ನಮಗೆ ಮತ್ತೆ ಆಶೀರ್ವಾದ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ: ಸಿಎಂ ಸಿದ್ದರಾಮಯ್ಯ