ಮೈಸೂರು: ಮಹಿಷ ದಸರಾ ಆಚರಣೆಗೆ ಚಾಮುಂಡಿ ಬೆಟ್ಟ ಸೂಕ್ತಿ ಅಲ್ಲ, ಅಲ್ಲಿ ಮಹಿಷ ದಸರಾ ಆಚರಣೆ ಮಾಡಲು ನಾವು ಬಿಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮಹಿಷ ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿ, ಚಾಮುಂಡಿ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ, ಅವರು ಬರುವುದು ಚಾಮುಂಡಿ ತಾಯಿಯ ಆಶೀರ್ವಾದ ಪಡೆಯುವುದಕ್ಕೆ ಹೊರತು ಬೇರೆಯಾವುದಕ್ಕೂ ಅಲ್ಲ ಎಂದರು.
ಆಸ್ತಿಕರಿಗೆ ತಾಯಿ ಚಾಮುಂಡಿ ಇದ್ದಾಳೆ. ಆಸ್ತಿಕತೆ ಇಲ್ಲದವರಿಗೆ ಇನ್ಯಾರೋ ಇರಬಹುದು ಅವರ ಫೋಟೋವನ್ನು ಅವರು ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಲಿ. ಇದನ್ನು ಚಾಮುಂಡಿ ಬೆಟ್ಟ ಎನ್ನುತ್ತಾರೆಯೇ ಹೊರತು ಮಹಿಷ ಬೆಟ್ಟ ಎನ್ನುವುದಿಲ್ಲ. ಏನಾದರೂ ಅನಾಚಾರ ಮಾಡಬೇಕು ಎಂದುಕೊಂಡರೆ ಮನೆಯಲ್ಲೇ ಮಹಿಷನ ಫೋಟೋ ಇಟ್ಟುಕೊಂಡು ನಿನ್ನ ತರಾ ಮಗನನ್ನು ದಯಪಾಲಿಸು ಎಂದು ಪೂಜೆ ಮಾಡಿಲಿ ಎಂದು ಹೇಳಿದರು.
ಈ ಅನಾಚಾರವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಲ್ಲಿಸಿದ್ದೇವೆ. ಮತ್ತೆ ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಅವರು ಯಾವ ದಿನಾಂಕದಂದು ಮಹಿಷಾ ದಸರಾ ಆಚರಣೆ ಮಾಡುತ್ತಾರೆ. ಅಂದು ನಾನು ಮಹಿಷನ ಪ್ರತಿಮೆಯ ಬಳಿ ಇರುತ್ತೇನೆ. ಸಂಘರ್ಷವಾದರೂ ಪರವಾಗಿಲ್ಲ ಮಹಿಷ ದಸರಾ ಆಚರಣೆಗೆ ಬಿಡುವುದಿಲ್ಲ. ನಮ್ಮ ಶಾಸಕರು, ಮೇಯರ್ ಎಲ್ಲರೂ ಸೇರಿ ಈ ಅನಾಚಾರವನ್ನು ತಡೆದೆ ತಡೆಯುತ್ತೇವೆ. ನಾನು ಈ ಬಗ್ಗೆ ಜಿಲ್ಲಾಡಳಿತ, ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸರ್ ಮಹಿಷ ದಸರಾಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಈಗ ಮತ್ತೆ ಈ ಅನಾಚಾರಕ್ಕೆ ಅವಕಾಶ ಮಾಡಿಕೊಡಬೇಡಿ. ಭಕ್ತರ ನಂಬಿಕೆಗೆ ಅಪಮಾನ ಮಾಡಬೇಡಿ. ಯಾರು ಮಹಿಷ ದಸರಾ ಆಚರಣೆ ಮಾಡಲು ಮುಂದಾಗಿದ್ದಾರೆ ಅವರ ಹೆಂಡತಿಯರು ಸಹ ಚಾಮುಂಡಿಯ ಭಕ್ತರಾಗಿರುತ್ತಾರೆ. ಆದರೆ, ಹೊರಗಡೆ ಬಂದಾಗ ಅನಾಚಾರ ಮಾಡುತ್ತಿರುತ್ತೀರಿ ಎಂದು ಕಿಡಿಕಾರಿದರು.
ಸನಾತನ ಧರ್ಮದ ವಿಚಾರವಾಗಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಹೇಳಿದ ಏಕೈಕ ಧರ್ಮ ಹಿಂದೂ ಧರ್ಮ. ಖಗೋಳ ವಿಜ್ಞಾನಕ್ಕೆ ನಮ್ಮ ಋಷಿಮುನಿಗಳು ಹಿಂದಿನ ಕಾಲದಲ್ಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಬೇರೆ ಧರ್ಮಗಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವೇ ಇಲ್ಲ. ಭೂಮಿ ಸುತ್ತ ಸೂರ್ಯ ಸುತ್ತುತ್ತಾನೆ ಎಂದು ಅವರು ಹೇಳುತ್ತಾರೆ. ಹಿಂದೂ ಧರ್ಮದ ಬಗ್ಗೆ ಅರಿವೇ ಇಲ್ಲದೆ, ಜ್ಞಾನವೇ ಇಲ್ಲದೇ ಕೆಲವರು ಅಸಂಬದ್ಧ ಮಾತುಗಳನ್ನು ಆಡುತ್ತಾರೆ. ಹಿಂದೂ ಧರ್ಮಕ್ಕೆ ಈ ಸೊಳ್ಳೆ ನೊಣಗಳನ್ನು ನುಂಗಿ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಸ್ಥಳೀಯ ಶಾಸಕರು, ಅಧಿಕಾರಿಗಳೊಂದಿಗೆ ಸಚಿವ ಎಂ ಬಿ ಪಾಟೀಲ್ ಸಭೆ