ಮೈಸೂರು: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರತದ ಮೊದಲ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾದ ನಾಲ್ಕು ತಿಂಗಳ ನಂತರ ಮೈಸೂರಿನಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ಮಾದರಿ ವರದಿಯಾಗಿದೆ. ಜಿಲ್ಲೆಯ ಕೆ ಆರ್ ನಗರದ ಗ್ರಾಮವೊಂದರ 12 ವರ್ಷದ ಬಾಲಕಿಯ ದೇಹದ ಮೇಲೆ ಬೊಬ್ಬೆಗಳು ಕಂಡಿವೆ. ಚಿಕಿತ್ಸೆ ಕೊಡಿಸಿದರೂ ಗುಣವಾಗದ ಹಿನ್ನೆಲೆ ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ, ಬಾಲಕಿಯ ದೇಹದಲ್ಲಿ ಬೊಬ್ಬೆಗಳು ಇರುವುದನ್ನು ಗಮನಿಸಿ ಮಂಕಿಪಾಕ್ಸ್ ಗುಣಲಕ್ಷಣ ಕಂಡು ಬಂದಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಕ್ಕೆ ತಂದಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷಾ ಮಾದರಿಗಳನ್ನು ರವಾನಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ವರದಿಯ ಬಗ್ಗೆ ಆತಂಕ ಪಡಬೇಕಿಲ್ಲ, ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆ ಕ್ಲಿನಿಕ್ ಹಾಗೂ ಮಕ್ಕಳ ಆಸ್ಪತ್ರೆಗಳಲ್ಲಿ ಮನಕಿಪಾಕ್ಸ್ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತುರ್ತು ಮಾಹಿತಿ ಒದಗಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಅಧಿಕಾರಿ ತಿಳಿಸಿದ್ದಾರೆ.
ನಿಯಮಾನುಸಾರ ಶಂಕಿತ ಬಾಲಕಿಯ ಊರು, ಪೋಷಕರ ಮಾಹಿತಿ ಗೌಪ್ಯವಾಗಿಡಲಾಗಿದೆ. ಬಾಲಕಿಯ ಪ್ರಾಥಮಿಕ ಸಂಪರ್ಕಿತರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಮಂಕಿಪಾಕ್ಸ್ ಹರಡುವ ವಿಧಾನ: ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಸೋಂಕಾಗಿದ್ದು, ಸಿಡುಬಿನಂತೆಯೇ ರೋಗ ಲಕ್ಷಣ ಹೊಂದಿದೆ. ಈ ಸೋಂಕು ಅಪಾಯದ ತೀವ್ರತೆ ಕಡಿಮೆ ಇದೆ. ಇದರಿಂದ ಪ್ರಾಣಾಪಾಯದ ಪ್ರಮಾಣವೂ ಕಡಿಮೆ. ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದಾಗಿದೆ.
ಇದರ ರೋಗಲಕ್ಷಣಗಳು ಜ್ವರದಿಂದ ಪ್ರಾರಂಭವಾಗುತ್ತವೆ. ನಂತರ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಂಕಿಪಾಕ್ಸ್ ಲಕ್ಷಣ ಮುಖ, ಕೈ, ಪಾದಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಬಳಿಕ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಸೋಂಕಿತ ಪ್ರಾಣಿಗಳ ನಿಕಟ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಓದಿ: ಭಾರತಕ್ಕೂ ಅಡಿ ಇಟ್ಟ ಆಫ್ರಿಕಾದ ಮಂಕಿಪಾಕ್ಸ್ ವೈರಸ್..ಕೇರಳದ ವ್ಯಕ್ತಿಯಲ್ಲಿ ದೃಢ