ಮೈಸೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ಕೋವಿಡ್ ಮಹಾಮಾರಿಗಿಂತ ಅಪಾಯಕಾರಿಯಾದದ್ದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ನಿರ್ಧಾರಗಳಿಂದ ಮಕ್ಕಳು ಶೈಕ್ಷಣಿಕವಾಗಿ ಕುಂಠಿತರಾಗುತ್ತಾರೆ. ಚುನಾವಣೆ ವೇಳೆ ರಾಜಕಾರಣ ಮಾಡೋದು ಸರಿ. ಅಧಿಕಾರ ಬಂದ ಮೇಲೆ ಜಾತ್ಯತೀತವಾಗಿ ನಡೆದುಕೊಳ್ಳುಬೇಕು ಎಂದರು.
ಕೋವಿಡ್ ಹಿನ್ನೆಲೆಯಿಂದ ಕಳೆದೆರಡು ವರ್ಷಗಳಿಂದ ಮಕ್ಕಳು ಶಾಲಾ - ಕಾಲೇಜುಗಳಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಾಲೆಯಲ್ಲಿ ಸಮಾನತೆ ಕಾಪಾಡಬೇಕು. ಅದಲ್ಲದೇ ರಾಜ್ಯ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ಕೊರೊನಾ ಮಹಾಮಾರಿಗಿಂತ ಅಪಾಯವಾದದ್ದು. ಸರ್ಕಾರ ಇದನ್ನು ಬಿಟ್ಟು ಬೇರೆ ಅಭಿವೃದ್ಧಿ ವಿಚಾರಗಳ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಹಿಜಾಬ್ ಹಾಗೂ ಮತಾಂತರ ವಿಚಾರವಾಗಿ ನ್ಯಾಯಾಲಯ ಸ್ಪಷ್ಟ ತೀರ್ಪ ನೀಡಿದೆ. ಸರ್ಕಾರ ಸಹ ಮತಾಂತರ ಕಾಯ್ದೆಯಲ್ಲಿ ಬಲವಂತದ ಮತಾಂತರ ಅಪರಾಧ ಎಂದಿದೆ. ಆದರೆ, ಇದೀಗ ಶಿಕ್ಷಣದಲ್ಲಿ ಧರ್ಮದ ವಿಚಾರ ಅಳವಡಿಸುವ ಮೂಲಕ ನಿಯಮ ಉಲ್ಲಂಘನೆ ಮಾಡುತ್ತಿದೆ. ಭಗವದ್ಗೀತೆ ಅಳವಡಿಸುವುದರಿಂದ ಏನಾಗುತ್ತೆ, ಏನಾಗಲ್ಲ ಅನ್ನೊದು ಪ್ರಶ್ನೆ ಅಲ್ಲ. ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಇದು ಬೇಡ. ಮಕ್ಕಳ ಶಿಕ್ಷಣಕ್ಕೆ ಹೊತ್ತು ಕೊಡಬೇಕು. ಅದನ್ನು ಬಿಟ್ಟು ಧರ್ಮವನ್ನು ಶಿಕ್ಷಣದಲ್ಲಿ ತರುವುದು ತಪ್ಪಾಗುತ್ತದೆ. ಹಾಗಾಗಿ ಸರ್ಕಾರ ರಾಜ್ಯದ ವಾತಾವರಣ ಹಾಳು ಮಾಡಬಾರದು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಮಾತನಾಡಿ, ಪರೀಕ್ಷೆಯಿಂದ ವಂಚಿತರಾಗಿರುವ ಹಲವು ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಅವಕಾಶ ಕೊಡಬೇಕು. ಇದಕ್ಕಾಗಿಯೇ ಕಾನೂನು ಇದೆ. ವೈಯಕ್ತಿಕ ಕಾರಣಗಳಿಗೆ ಪರೀಕ್ಷೆ ತಪ್ಪಿಸಿಕೊಂಡರೆ ಪರೀಕ್ಷೆ ಕೊಡಲು ಸಾಧ್ಯವಿಲ್ಲ. ಆದರೆ, ಈ ವಿಚಾರವೇ ಬೇರೆ, ಹೀಗಾಗಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ ಎಂದು ಹೇಳಿದರು.
ಹಿಜಾಬ್ ಬೇಡಿಕೆಗಾಗಿ ಎಲ್ಲೂ ಪ್ರತಿಭಟನೆ ಮಾಡುತ್ತಿಲ್ಲ. ಸ್ವಯಂ ಪ್ರೇರಿತರಾಗಿ ಹಲವು ಕಡೆ ಬಂದ್ ಮಾಡಲಾಗಿತ್ತು. ಅದು ಯಶಸ್ವಿಯೂ ಆಗಿದೆ. ಸರ್ಕಾರದ ಗಮನ ಸೆಳೆದಿದೆ. ಗಾಂಧಿ ತತ್ವದಡಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ ಎಂದು ತಿಳಿಸಿದರು.
'ದಿ ಕಾಶ್ಮೀರ್ ಫೈಲ್' ಸಿನಿಮಾ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನೋಡುವುದಿಲ್ಲ. ಇಂದು ಕಾಶ್ಮೀರ್ ಫೈಲ್ ಬಂದಿದೆ. ನಾಳೆ ಗುಜರಾತ್ ಫೈಲ್, ಹೀಗೆ ಇನ್ನು ಯಾವ ಫೈಲ್ ಬರಲಿದೆಯೋ ಗೊತ್ತಿಲ್ಲ. ನಾನು ಈ ಚಿತ್ರವನ್ನು ನೋಡುವುದಿಲ್ಲ. ಸಿನಿಮಾ ವಿಚಾರವಾಗಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.